ಪ್ರಧಾನಿ ನರೇಂದ್ರ ಮೋದಿಯವರ ತವರು ರಾಜ್ಯ ಗುಜರಾತ್ನ ಮೆಹಸಾನ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಕಣ ಈಗ ಇಡೀ ದೇಶದ ಗಮನ ಸೆಳೆದಿದೆ. ಇದಕ್ಕೆ ಕಾರಣ ಅಲ್ಲಿನ ಅಭ್ಯರ್ಥಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಒಂದು ಅಚ್ಚರಿಯ ಹೆಸರು. ಸುಮಾರು ಮೂರು ದಶಕಗಳಿಂದ ಪಕ್ಷದ ಕಚೇರಿಯಲ್ಲಿ ಗುಮಾಸ್ತ ಮತ್ತು ಸೇವಕನಾಗಿ ಕೆಲಸ ಮಾಡುತ್ತಿದ್ದ ರಮೇಶ್ ಭಿಲ್ ಅವರಿಗೆ ಬಿಜೆಪಿ ಈ ಬಾರಿ ಅಧಿಕೃತವಾಗಿ ಟಿಕೆಟ್ ನೀಡುವ ಮೂಲಕ ರಾಜಕೀಯ ಕ್ಷೇತ್ರದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.
ಕೇವಲ ಹತ್ತನೇ ತರಗತಿಯವರೆಗೆ ಓದಿರುವ 50 ವರ್ಷ ಪ್ರಾಯದ ರಮೇಶ್ ಭಿಲ್ ಕಳೆದ 28 ವರ್ಷಗಳಿಂದ ಮೆಹಸಾನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಚೇರಿಗೆ ಬರುವ ಹಿರಿಯ ನಾಯಕರು ಮತ್ತು ಕಾರ್ಯಕರ್ತರಿಗೆ ಚಹಾ ಮತ್ತು ನೀರು ಸರಬರಾಜು ಮಾಡುವುದು, ಕಚೇರಿಯ ನಿರ್ವಹಣೆಯನ್ನು ಅಚ್ಚುಕಟ್ಟಾಗಿ ಮಾಡುವುದು ಅವರ ದೈನಂದಿನ ಕಾಯಕವಾಗಿತ್ತು. ಅಧಿಕಾರದ ಆಸೆ ಇಲ್ಲದೆ ಕೇವಲ ಸೇವೆಯನ್ನೇ ಪರಮಧರ್ಮವೆಂದು ನಂಬಿದ್ದ ರಮೇಶ್ ಅವರಿಗೆ ಪಕ್ಷವು ಈಗ ವಾರ್ಡ್ ಸಂಖ್ಯೆ 13 ರಿಂದ ಸ್ಪರ್ಧಿಸಲು ಅಭ್ಯರ್ಥಿಯನ್ನಾಗಿ ಘೋಷಿಸಿದೆ.
ಪಕ್ಷದ ಈ ಐತಿಹಾಸಿಕ ತೀರ್ಮಾನವು ಕಾರ್ಯಕರ್ತರಿಗೇ ಮೊದಲು ಎಂಬ ಸಿದ್ಧಾಂತಕ್ಕೆ ಹಿಡಿದ ಕೈಗನ್ನಡಿಯಂತಿದೆ. ತಳಮಟ್ಟದ ಸಾಮಾನ್ಯ ಕೆಲಸಗಾರನೂ ಸಹ ಒಂದು ದಿನ ಶಾಸನಸಭೆ ಅಥವಾ ಮಹಾನಗರ ಪಾಲಿಕೆಯ ಮೆಟ್ಟಿಲು ಏರಬಹುದು ಎಂಬ ಭರವಸೆಯನ್ನು ಈ ನಿರ್ಧಾರ ನೀಡಿದೆ. ಯಾವುದೇ ರಾಜಕೀಯ ಪ್ರಭಾವ ಅಥವಾ ಆರ್ಥಿಕ ಬಲವಿಲ್ಲದಿದ್ದರೂ, ಕೇವಲ ನಿಷ್ಠೆ ಮತ್ತು ಕಠಿಣ ಪರಿಶ್ರಮದಿಂದ ಇಂತಹ ಉನ್ನತ ಸ್ಥಾನವನ್ನು ಪಡೆಯಬಹುದು ಎಂಬ ಸಂದೇಶವನ್ನು ಬಿಜೆಪಿ ಈ ಮೂಲಕ ತನ್ನ ಕಾರ್ಯಕರ್ತರಿಗೆ ರವಾನಿಸಿದೆ.
ತಮ್ಮ ವಾರ್ಡ್ ಸಂಖ್ಯೆ 13 ರಲ್ಲಿ ಶನಿವಾರ ನಾಮಪತ್ರ ಸಲ್ಲಿಸಿದ ನಂತರ ರಮೇಶ್ ಭಿಲ್ ಅತ್ಯಂತ ಭಾವುಕರಾಗಿ ಮಾತನಾಡಿದರು. ಕಳೆದ 28 ವರ್ಷಗಳಿಂದ ನಾನು ಶಿಸ್ತಿನ ಸಿಪಾಯಿಯಂತೆ ಪಕ್ಷದ ನಾಯಕರ ಸೇವೆ ಮಾಡಿದ್ದೇನೆ. ಆದರೆ ಈಗ ಪಕ್ಷವು ನನ್ನ ಮೇಲೆ ಭರವಸೆ ಇಟ್ಟು ಜನರ ಸೇವೆ ಮಾಡಲು ದೊಡ್ಡ ಜವಾಬ್ದಾರಿ ನೀಡಿದೆ. ಈ ಹಿಂದೆ ಕಚೇರಿಯನ್ನು ಹೇಗೆ ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೋ, ಅದೇ ರೀತಿ ನನ್ನ ವಾರ್ಡ್ ನ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ.
ಸ್ಥಳೀಯ ನಾಯಕರ ಪ್ರಕಾರ, ರಮೇಶ್ ಅವರು ಸಾಮಾನ್ಯ ಜನರ ಸಂಕಷ್ಟಗಳನ್ನು ತೀರಾ ಹತ್ತಿರದಿಂದ ಕಂಡಿದ್ದಾರೆ. ಜನರೊಂದಿಗೆ ಅವರಿಗಿರುವ ನಿಕಟ ಸಂಪರ್ಕ ಮತ್ತು ಅವರ ಸರಳ ವ್ಯಕ್ತಿತ್ವವು ಚುನಾವಣೆಯಲ್ಲಿ ಅವರಿಗೆ ಗೆಲುವು ತಂದುಕೊಡಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಕಚೇರಿಯಲ್ಲಿ ಚಹಾ ನೀಡುತ್ತಿದ್ದ ವ್ಯಕ್ತಿ ಈಗ ಜನರ ಪ್ರತಿನಿಧಿಯಾಗಿ ಸ್ಪರ್ಧಿಸುತ್ತಿರುವುದು ಮತದಾರರಲ್ಲಿಯೂ ಭಾರೀ ಮೆಚ್ಚುಗೆ ಮತ್ತು ಕುತೂಹಲಕ್ಕೆ ಕಾರಣವಾಗಿದೆ.








