ಬೆಂಗಳೂರು : ಸೋತವರಿಗೆ ಸಚಿವಸ್ಥಾನ ನೀಡಬಾರದು ಎಂಬ ಕೆಲ ಬಿಜೆಪಿ ಶಾಸಕರು ಹೇಳಿಕೆಗಳ ಬೆನ್ನಲ್ಲೆ ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವಂತೆ ಕಡೆ ಕ್ಷಣದವರೆಗೂ ಹೋರಾಟ ನಡೆಸುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಆ ಮೂಲಕ ಮೂಲ ಬಿಜೆಪಿ ನಾಯಕರಿಗೆ ಬೆಳಗಾವಿ ಸಾಹುಕಾರ್ ತಿರುಗೇಟು ನೀಡಿದ್ದಾರೆ.

ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವುದು, ಬಿಡುವುದು ಹೈಕಮಾಂಡ್ ಮತ್ತು ಸಿಎಂ ಯಡಿಯೂರಪ್ಪಗೆ ಬಿಟ್ಟ ವಿಚಾರ. ಆದರೆ, ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವಂತೆ ಕಡೆ ಕ್ಷಣದವರೆಗೂ ಹೋರಾಟ ನಡೆಸುತ್ತೇನೆ. ಯೋಗೇಶ್ವರ್ ನನ್ನ ಗೆಳೆಯ. ಅವರನ್ನು ಸಚಿವರನ್ನಾಗಿ ಮಾಡಬಾರದು, ಸೋತವರನ್ನು ಸಚಿವರನ್ನಾಗಿ ಮಾಡಬೇಡಿ ಎಂದು ಕೆಲ ಶಾಸಕರು ನನ್ನನ್ನು ಭೇಟಿ ಮಾಡಿ ಹೇಳಿರುವುದು ನಿಜ. ಆದರೆ, ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡುವಂತೆ ಹೋರಾಡುವುದು ನನ್ನ ಧರ್ಮ ಮತ್ತು ಕರ್ತವ್ಯ. ಇದನ್ನು ಯೋಗೇಶ್ವರ್ ವಿರುದ್ಧ ಹೇಳಿಕೆ ನೀಡಿದ್ದ ಶಾಸಕರಿಗೂ ತಿಳಿಸಿದ್ದೇನೆ ಎಂದು ತಿಳಿಸಿದರು.
ಇನ್ನು ರಾಜಕಾರಣದಲ್ಲಿ ಆಶಾಭಾವನೆ ಇರಿಸಿಕೊಂಡಿರಬೇಕು, ಅದರಂತೆ ಸಿ.ಪಿ ಯೋಗೇಶ್ವರ್ ವಿಚಾರದಲ್ಲಿಯೂ ಇರಿಸಿಕೊಂಡಿದ್ದೇವೆ. ಅವರಿಗೆ ಸಚಿವ ಸ್ಥಾನ ಸಿಗಲಿದೆ ಎನ್ನುವ ಆಶಾಭಾವ ನಮ್ಮಲ್ಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಶಶಿಕಲಾ ಜೊಲ್ಲೆ ಅವರ ಬಗ್ಗೆ ಮಾತನಾಡಿ, ಶಶಿಕಲಾ ಜೊಲ್ಲೆ ನನ್ನ ಸಹೋದರಿ. ಅವರು ಆಗಾಗ ನಮ್ಮ ಮನೆಗೆ ಬರುತ್ತಿರುತ್ತಾರೆ ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರನ್ನು ಸಂಪುಟದಿಂದ ಕೈ ಬಿಡುತ್ತಾರೆ, ಅದಕ್ಕಾಗಿ ಬರುತ್ತಿದ್ದಾರೆ ಎಂದಲ್ಲ. ಯಾವುದೇ ಸಚಿವರನ್ನು ಸೇರಿಸಿಕೊಳ್ಳುವುದು. ಕೈ ಬಿಡುವುದು ಹೈಕಮಾಂಡ್ ಮತ್ತು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








