ಬೆಳಗಾವಿ : ಕಳಸಾ, ಬಂಡೂರಿ ಕಾಮಗಾರಿ ಆರಂಭ ವಿಚಾರವಾಗಿ ದೆಹಲಿಗೆ ತೆರಳಿ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ಬೆಳಗಾವಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜಲಸಂಪನ್ಮೂಲ ಸಚಿವನಾದ ಬಳಿಕ ರಾಜ್ಯದ ಎಲ್ಲಾ ಜಲಾಶಯಕ್ಕೆ ಭೇಟಿ ನೀಡಿ ಏನೆಲ್ಲಾ ಕೆಲಸ ಆಗಬೇಕು ಎನ್ನುವ ಬಗ್ಗೆ ಚರ್ಚೆ ಮಾಡಿದ್ದೇನೆ. ಕಳಸಾ, ಬಂಡೂರಿ ಕಾಮಗಾರಿ ಆರಂಭ ವಿಚಾರ ಕುರಿತು ದೆಹಲಿಗೆ ಹೋಗಲು ವಿಮಾನ ಸೌಲಭ್ಯ ಇಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ರಸ್ತೆಯ ಮೂಲಕವೇ ಅಧಿಕಾರಿಗಳ ಜೊತೆಗೆ ದೆಹಲಿಗೆ ತೆರಳಿ ಕೇಂದ್ರ ಸಚಿವರ ಜೊತೆ ಚರ್ಚೆ ಮಾಡಲಾಗುವುದು ಎಂದರು.
ಇನ್ನು ಕುಡಿಯುವ ನೀರು, ಕೆರೆ ತುಂಬುವ ಯೋಜನೆಗೆ ಆದ್ಯತೆ ಕೊಡಲಾಗುವುದು. ನವಿಲಿ ಡ್ಯಾಂ, ಗಟ್ಟಿ ಬಸವಣ್ಣ ಡ್ಯಾಂ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನವಲಿ ಡ್ಯಾಂ ನಿರ್ಮಾಣಕ್ಕೆ ತೆಲಂಗಾಣ, ಆಂಧ್ರಪ್ರದೇಶ ಸರ್ಕಾರದಿಂದ ಸಹಕಾರ ಸಿಕ್ಕಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ ವೇಳೆ ಕೃಷ್ಣಾ ನದಿ ನೀರು ಹಂಚಿಕೆ ವಿಚಾರವಾಗಿ ಮಾತನಾಡಿದ ಅವರು, ಶೀಘ್ರದಲ್ಲೇ ಮಹಾರಾಷ್ಟ್ರ ನೀರಾವರಿ ಸಚಿವ ಜಯಂತ ಪಾಟೀಲ್ ಅವರನ್ನು ಭೇಟಿ ಮಾಡುತ್ತೇವೆ. ಬೆಂಗಳೂರಿನಲ್ಲಿ ಈ ಬಗ್ಗೆ ಸಭೆ ನಡೆಯಲಿದೆ. ಅಥಣಿ, ಜಮಖಂಡಿ ಭಾಗಕ್ಕೆ ನೀರು ಕಲ್ಪಿಸಲು ಮಹಾರಾಷ್ಟ್ರ ಸರ್ಕಾರದ ಬಳಿ ಮನವಿ ಮಾಡಲಾಗುವುದು ಎಂದು ರಮೇಶ್ ಜಾರಕಿಹೊಳಿ ಮಾಹಿತಿ ನೀಡಿದರು.