ಬೆಂಗಳೂರು : ಕೋವಿಡ್-19 ಸಾಮಗ್ರಿಗಳು, ವೆಂಟಿಲೇಟರ್ ಖರೀದಿಯಲ್ಲಿ ಅಕ್ರಮ ನಡೆದಿದೆ. ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾವು ಸಂಗ್ರಹಿಸಿದ್ದೇವೆ. ಎಲ್ಲಾ ದಾಖಲೆಗಳನ್ನು ಗುರುವಾರ ಬಹಿರಂಗ ಪಡಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ನಾಯಕ ಸಭೆಯ ಬಳಿಕ ಮಾತನಾಡಿದ ಅವರು, ಕೊರೊನಾ ಹೆಸರಲ್ಲಿ ರಾಜ್ಯ ಸರ್ಕಾರ ಸಾಕಷ್ಟು ಅವ್ಯವಹಾರ ನಡೆಸಿದೆ. ಒಂದೆಡರು ದಿನಗಳಲ್ಲಿ ನಗರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ನಾನು ಪತ್ರಿಕಾಗೋಷ್ಟಿ ನಡೆಸಿ ಸರ್ಕಾರದ ಎಲ್ಲಾ ವಿಚಾರಗಳನ್ನು ಬಹಿರಂಗಪಡಿಸುತ್ತೇವೆ. ಅಂತೆಯೇ ಎಲ್ಲಾ ಜಿಲ್ಲೆಗಳಿಗೆ ಮಾಜಿ ಸಚಿವರು, ಕೇಂದ್ರ ನಾಯಕರನ್ನು ನಿಯೋಜಿಸಲಾಗಿದೆ. ಅವರು ಜಿಲ್ಲೆಗಳಲ್ಲಿ ಸುದ್ದಿಗೋಷ್ಟಿ ಹಾಗೂ ಪಕ್ಷದ ಸಭೆಗಳನ್ನು ನಡೆಸಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದರು.
ಇದೇ ವೇಳೆ ರಾಮುಲು ಸ್ಪಷ್ಟನೆ ಬಗ್ಗೆ ಮಾತನಾಡಿದ ಅವರು, ಅಶೋಕಣ್ಣ, ಶ್ರೀರಾಮುಲು ಅಣ್ಣ, ಸುಧಾಕರಣ್ಣ ಏನು ಬೇಕಾದ್ರೂ ಮಾತನಾಡಲಿ. ಆದರೆ ನಾವು ಜನರ ಜೊತೆ ಇರುವ ಕೆಲಸ ಮಾಡುತ್ತೇವೆ ಎಂದರು.
ಕೋವಿಡ್ ನಲ್ಲಿ ನಡೆದಿರುವ ಅವ್ಯವಹಾರಗಳ ಎಲ್ಲಾ ದಾಖಲೆಗಳನ್ನ ಸಂಗ್ರಹಿಸಿದ್ದೇವೆ. ಅಂತೆಯೇ ಸರ್ಕಾರ ಹೈಕೋರ್ಟ್ ಗೆ ಸಲ್ಲಿಸಿರುವ ದಾಖಲೆಯೂ ನಮ್ಮ ಬಳಿ ಇದೆ. ತಮಿಳುನಾಡು ಸರ್ಕಾರ ಖರೀದಿಸಿರುವ ದಾಖಲೆಗಳನ್ನು ಪಡೆದುಕೊಂಡಿದ್ದೇವೆ. ಜೊತೆಗೆ ಹಲವು ಮಾಹಿತಿಯನ್ನ ನಾವು ಸಂಗ್ರಹಿಸಿದ್ದು ಗುರುವಾರ ಎಲ್ಲದಕ್ಕೂ ಸ್ಪಷ್ಟವಾದ ಉತ್ತರ ನೀಡುತ್ತೇವೆ ಎಂದು ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.








