Ranaji Trophy : ಮಯಾಂಕ್ ಪಡೆಗೆ ಇನ್ನಿಂಗ್ಸ್ ಮುನ್ನಡೆ
ಕಠಿಣ ಸವಾಲುಗಳನ್ನು ಎದುರಿಸಿದ ಆತಿಥೇಯ ಕರ್ನಾಟಕ ಛತ್ತೀಸ್ಗಢ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.
ಮೂರನೆ ದಿನದಾಟದ ಪಂದ್ಯದಲ್ಲಿ ಆತಿಥೇಯ ಕರ್ನಾಟಕ ಮೊದಲ ಇನ್ನಿಂಗ್ಸ್ನಲ್ಲಿ 336 ರನ್ಗಳಿಗೆ ಸರ್ವ ಪತನ ಕಂಡಿತು. ಛತ್ತೀಸ್ಗಢ ಎರಡನೆ ಇನ್ನಿಂಗ್ಸ್ನಲ್ಲಿ 2 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿ ಆಘಾತ ಅನುಭವಿಸಿದೆ.
ಮೂರನೆ ದಿನ ಬ್ಯಾಟಿಂಗ್ ಮುಂದುವರೆಸಿದ ನಾಯಕ ಮಯಾಂಕ್ ಅಗರ್ವಾಲ್ 117 ರನ್ ಗಳಿಸಿ ರೂಹಿಕಾರ್ಗೆ ವಿಕೆಟ್ ಒಪ್ಪಿಸಿದರು. 32 ರನ್ ಗಳಿಸಿದ್ದ ವಿಶಾಲ್ ಒನತ್ ರನೌಟ್ ಬಲೆಗೆ ಬಿದ್ದರು .
ಮನೀಶ್ ಪಾಂಡೆ 5 ರನ್ ಗಳಿಸಿ ಮಂಡಲ್ ಎಸೆತದಲ್ಲಿ ಸ್ಟಂಪ್ ಔಟ್ ಆದರು. ಒಂದು ಹಂತದಲ್ಲಿ ಇನ್ನಿಂಗ್ಸ್ ಹಿನ್ನಡೆ ಅನುಭವಿಸುವ ಆತಂಕ ಎದುರಿಸಿತು. ಶ್ರೇಯಸ್ ಗೋಪಾಲ್ 23, ಬಿ.ಆರ್.ಶರತ್ 6, ಕೆ.ಗೌತಮ್ 18 ರನ್ ಗಳಿಸಿದರು.
ಏಕಾಂಗಿ ಹೋರಾಟ ಮಾಡಿದ ನಿಕಿನ್ ಜೋಸ್ ಅರ್ಧ ಶತಕ (67 ರನ್) ಸಿಡಿಸಿ ಮಂಡಲ್ಗೆ ಬಲಿಯಾದರು. ವಿಜಯ್ ಕುಮಾರ್ ವೈಶಾಕ್ 6, ವಾಸೂಕಿ ಕೌಶಿಕ್ 1 ರನ್ ಕಲೆ ಹಾಕಿದರು. ಕರ್ನಾಟಕ ತಂಡ 55 ರನ್ಗಳ ಮುನ್ನಡೆ ಪಡೆಯಿತು.
ಛತ್ತೀಸ್ಗಢ ಪರ ಅಜಯ್ ಮಂಡಲ್ 4, ರವಿ ಕಿರಣ್, ಸೌರಭ್ ಮಜಂಧರ್ ಹಾಗೂ ಶಶಾಂಕ್ ಸಿಂಗ್ ತಲಾ 1 ವಿಕೆಟ್ ಪಡೆದರು.
ದಿನದಾಟದ ಅಂತ್ಯದಲ್ಲಿ ಎರಡನೆ ಇನ್ನಿಂಗ್ಸ್ ಆರಂಭಿಸಿದ ಛತ್ತೀಸ್ಗಢ ಆರಂಭಿಕ ಬ್ಯಾಟರ್ ಅವಿನಾಶ್ (0), ಅನೂಜ್ ತಿವಾರಿ (0) ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು. ಅವಿನಾಶ್ ಅನೂಜ್ ತಿವಾರಿ ಟೂರ್ನಿಯಲ್ಲಿ 2ನೇ ಬಾರಿ ಡಕೌಟ್ ಆಗಿದ್ದಾರೆ.
ಆಶೂತೋಶ್ ಸಿಂಗ್ ಅಜೇಯ 8, ಅಮನದೀಪ್ ಖಾರೆ ಅಜೇಯ 23 ರನ್ ಗಳಿಸಿದರು. ವಿದ್ವತ್ ಕಾವೇರಪ್ಪ, ವಾಸುಕಿ ಕೌಶಿಕ್ ತಲಾ 1 ವಿಕೆಟ್ ಪಡೆದರು.








