Ranji Trophy – KER vs KAR : ಮಯಂಕ್ ದ್ವಿಶತಕ , ಕರ್ನಾಟಕಕ್ಕೆ ಮುನ್ನಡೆ
ನಾಯಕ ಮಯಂಕ್ ಅಗರ್ವಾಲ್(208) ಅವರ ದ್ವಿಶತಕದ ನೆರವಿನಿಂದ ಕೇರಳ ವಿರುದ್ಧದ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಕರ್ನಾಟಕ ಮೊದಲ ಇನ್ನಿಂಗ್ಸ್ ಮುನ್ನಡೆ ಕಾಯ್ದುಕೊಂಡಿದೆ.
ತಿರುವನಂತಪುರಂನ ತುಂಬದಲ್ಲಿರುವ ಸೆಂಟ್ ಎಕ್ಸೇವಿಯರ್ಸ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ಕರ್ನಾಟಕದ ಬ್ಯಾಟ್ಸ್‌ಮನ್‌ಗಳು ಉತ್ತಮ ಪ್ರದರ್ಶನ ನೀಡಿದರು. ಪರಿಣಾಮ ದಿನದ ಅಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 410 ರನ್‌ಗಳಿಸಿರುವ ಕರ್ನಾಟಕ ಆ ಮೂಲಕ ಮೊದಲ ಇನ್ನಿಂಗ್ಸ್‌ನಲ್ಲಿ 68 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ರಾಜ್ಯ ತಂಡದ ಪರ ಬಿಆರ್ ಶರತ್(47*) ಹಾಗೂ ಶುಭಾಂಗ್ ಹೆಗ್ಡೆ(8*) ರನ್‌ಗಳೊಂದಿಗೆ ಕಣದಲ್ಲಿದ್ದಾರೆ.
ಎರಡನೇ ದಿನದಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 137 ರನ್‌ಗಳಿಂದ ದಿನದಾಟ ಆರಂಭಿಸಿದ ಕರ್ನಾಟಕಕ್ಕೆ ನಿಕಿನ್ ಜೋಸ್(54) ಹಾಗೂ ನಾಯಕ ಮಯಂಕ್ ಅಗರ್ವಾಲ್(208) ಉತ್ತಮ ಆರಂಭ ಒದಗಿಸಿದರು. ಕೇರಳ ತಂಡದ ಬೌಲಿಂಗ್ ದಾಳಿಗೆ ದಿಟ್ಟ ಪ್ರತ್ಯುತ್ತರ ನೀಡಿದ ಈ ಜೋಡಿ 3ನೇ ವಿಕೆಟ್‌ಗೆ 151 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು.
ಆದರೆ ನಂತರ ಬಂದ ಮನೀಷ್ ಪಾಂಡೆ(0) ಮೊದಲ ಬಾಲ್‌ನಲ್ಲೇ ಔಟಾಗಿ ನಿರಾಸೆ ಮೂಡಿಸಿದರು.
ನಂತರ ನಾಯಕ ಜೊತೆಯಾದ ಶ್ರೇಯಸ್ ಗೋಪಾಲ್(48) ಉಪಯುಕ್ತ ರನ್‌ಗಳಿಸಿ ತಂಡಕ್ಕೆ ಆಸರೆಯಾದರು. ಆದರೆ ನಾಯಕನಾಗಿ ಜವಾಬ್ದಾರಿ ಆಟವಾಡಿದ ಮಯಂಕ್ ಅಗರ್ವಾಲ್(208) ದ್ವಿಶತಕ ದಾಖಲಿಸಿದರಲ್ಲದೆ ತಂಡಕ್ಕೆ ಇನ್ನಿಂಗ್ಸ್ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾದರು.
ಬಳಿಕ 7ನೇ ವಿಕೆಟ್‌ಗೆ ಜೊತೆಯಾದ ಶರತ್(47*) ಹಾಗೂ ಶುಭಾಂಗ್ ಹೆಗ್ಡೆ(8*) ಅಜೇಯ 32 ರನ್‌ಗಳ ಜೊತೆಯಾಟದೊಂದಿಗೆ ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಕೇರಳ ಪರ ವೈಶಾಖ್ ಚಂದ್ರನ್, ಜಲಜ್ ಸಕ್ಸೇನಾ ತಲಾ 2 ವಿಕೆಟ್ ಪಡೆದರೆ. ನಿದೀಶ್ ಹಾಗೂ ಚಂದ್ರನ್ ಸಹ ತಲಾ 1 ವಿಕೆಟ್ ಪಡೆದರು.