ದೈವಕ್ಕೆ ಅವಮಾನ ಮಾಡಿದ್ದಾನೆ ಎಂಬ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟ ರಣವೀರ್ ಸಿಂಗ್, ವಿವಾದ ಉದ್ಭವಿಸಿದ ಹಿನ್ನೆಲೆ ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆಯಾಚಿಸಿ ಪರಿಸ್ಥಿತಿಯನ್ನು ಸಮಾಧಾನಗೊಳಿಸಲು ಮುಂದಾಗಿದ್ದಾರೆ.
ಈ ಘಟನೆ ನಡೆದದ್ದು ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವೇದಿಕೆಯಲ್ಲಿ. ಕಾರ್ಯಕ್ರಮದಲ್ಲಿ ಕನ್ನಡದ ಖ್ಯಾತ ನಿರ್ದೇಶಕ ರಿಷಭ್ ಶೆಟ್ಟಿ ಅವರ ಎದುರುಗಡೆ ಮಾತನಾಡುವಾಗ, ದೈವ ಸಂಪ್ರದಾಯಕ್ಕೆ ಅವಮಾನವಾಗಿ ತೋರುವ ರೀತಿಯಲ್ಲಿ ರಣವೀರ್ ಹಾಸ್ಯ ಮಾಡಿದ್ದಾರೆ ಎಂಬ ಆರೋಪ ವ್ಯಕ್ತವಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರು ರಣವೀರ್ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿವಾದ ಗಂಭೀರ ತಿರುವು ಪಡೆದ ನಂತರ, ರಣವೀರ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಕ್ಷಮೆಯ ಸಂದೇಶ ನೀಡಿ, ನಾನು ಎಲ್ಲ ಸಂಸ್ಕೃತಿಗಳನ್ನು ಗೌರವಿಸುತ್ತೇನೆ. ಯಾರ ಧಾರ್ಮಿಕ ಭಾವನೆಗಳಿಗೂ ನೋವುಂಟುಮಾಡುವ ಉದ್ದೇಶ ನನ್ನದಲ್ಲ. ನನ್ನ ಮಾತುಗಳಿಂದ ಯಾರಿಗಾದರೂ ನೋವಾದಿದ್ದರೆ, ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ಈ ಬಗ್ಗೆ ರಿಷಭ್ ಶೆಟ್ಟಿ ಅಥವಾ ಕಾರ್ಯಕ್ರಮ ಆಯೋಜಕರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ, ಆದರೆ ರಣವೀರ್‌ನ ಕ್ಷಮೆಯಾಚನೆ ಸಾಮಾಜಿಕ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳನ್ನೇ ಪಡೆಯುತ್ತಿದೆ. ಕೆಲವರು ಅವರ ಕ್ಷಮೆಯಾಚನೆಯನ್ನು ಸ್ವಾಗತಿಸಿದ್ದರೆ, ಇನ್ನೂ ಹಲವರು ಇದು ಕೇವಲ ವಿವಾದ ಶಮನಕ್ಕೆ ಮಾಡಿದ ಕ್ರಮವೆಂದು ಟೀಕಿಸುತ್ತಿದ್ದಾರೆ.








