ಮುಂಬೈ: ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವಿನ ಹಿಂದೆ ಡ್ರಗ್ಸ್ ಮಾಫಿಯಾ ವಿಚಾರವಾಗಿ ಸಿಬಿಐ ತನಿಖೆ ನಡೆಯುತ್ತಿರುವಾಗಲೇ ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಬಾಲಿವುಡ್ ಸ್ಟಾರ್ ನಟರಾದ ರಣವೀರ್ ಸಿಂಗ್, ರಣಬೀರ್ ಸಿಂಗ್, ಅಯಾನ್ ಮುಖರ್ಜಿ, ವಿಕ್ಕಿ ಕೌಶಿಕ್ರ ಡ್ರಗ್ ಟೆಸ್ಟ್ ಮಾಡಿಸಬೇಕು. ಇವರು ತಮ್ಮ ರಕ್ತದ ಮಾದರಿಯನ್ನು ಡ್ರಗ್ ಟೆಸ್ಟ್ಗೆ ನೀಡಲಿ ಎಂದು ಸವಾಲು ಹಾಕಿದ್ದಾರೆ.
ಈ ನಾಲ್ವರು ಕೊಕೇನ್ ಅಡಿಕ್ಟ್ ಎಂಬ ವದಂತಿ ಹರಿದಾಡುತ್ತಿದೆ. ಇವರು ಟೆಸ್ಟ್ನಲ್ಲಿ ಕ್ಲೀನ್ ಎಂದು ಸಾಬೀತಾದರೆ ಲಕ್ಷಾಂತರ ಜನರಿಗೆ ಸ್ಪೂರ್ತಿಯಾಗುತ್ತಾರೆ ಎಂದು ಕಂಗನಾ ರಣಾವತ್ ಟ್ವಿಟರ್ನಲ್ಲಿ ಆಗ್ರಹಿಸಿದ್ದಾರೆ.
ಕರಣ್ ಜೋಹರ್ ಸಿನಿಮಾ ಮಾಫಿಯಾದ ಕಿಂಗ್ಪಿನ್
ಬಾಲಿವುಡ್ ನಟರ ಜನ್ಮ ಜಾಲಾಡುತ್ತಿರುವ ನಟಿ ಕಂಗನಾ ರಣಾವತ್, ನಿರ್ದೇಶಕ ಕರಣ್ ಜೋಹರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಾಲಿವುಡ್ನ ಸಿನಿಮಾ ಮಾಫಿಯಾದ ಪ್ರಮುಖ ಆರೋಪಿ ಕರಣ್ ಜೋಹರ್. ಹೊರಗಿನಿಂದ ಬರುವ ನಟರನ್ನು ಬೆಳೆಯಲು ಈ ಮಾಫಿಯಾ ಬಿಡುವುದಿಲ್ಲ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ತಮ್ಮ ಟ್ವೀಟ್ನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿರುವ ಕಂಗನಾ ರಣಾವತ್, ಕರಣ ಜೋಹರ್ ಸೇರಿದಂತೆ ಈ ಮಾಫಿಯಾ ಹಲವರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ. ಆದರೂ ಇವರ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಈಗಲಾದರೂ ಈ ಕ್ರೂರಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಆಶಿಸುತ್ತೇನೆ ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ಮೂವಿ ಮಾಫಿಯಾ ಬಗ್ಗೆ ಸುಶಾಂತ್ ಸಿಂಗ್ ಜಿಮ್ ಪಾರ್ಟನರ್ ಬಹಿರಂಗಪಡಿಸಿದ್ದಾರೆ ಎಂದು ಕಂಗನಾ ಮತ್ತೊಂದು ಟ್ವೀಟ್ನಲ್ಲಿ ಮಾಹಿತಿ ನೀಡಿದ್ದಾರೆ.