ಡೆಹ್ರಾಡೂನ್ : ಉತ್ತರಾಖಂಡದ ದ್ವಾರಹಾರ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿ ಶಾಸಕ ಮಹೇಶ್ ನೇಗಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ. 2016ರಿಂದ 2018ರ ಅವಧಿಯಲ್ಲಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆಪಾದಿಸಿದ್ದಾರೆ. ಅಲ್ಲದೆ ತನ್ನ ಮಗುವಿಗೆ ಶಾಸಕ ಮಹೇಶ್ ನೇಗಿಯೇ ತಂದೆ ಎಂದಿರುವ ಮಹಿಳೆ, ಸತ್ಯ ಪತ್ತೆಹಚ್ಚಲು ಡಿಎನ್‌ಎ ಪರೀಕ್ಷೆ ನಡೆಸಲಿ ಎಂದು ಸವಾಲು ಹಾಕಿದ್ದಾರೆ.
ಮಸ್ಸೂರಿ, ನೈನಿತಾಲ್, ದೆಹಲಿ, ಹಿಮಾಚಲ ಪ್ರದೇಶ ಮತ್ತು ನೇಪಾಳಕ್ಕೆ ತನ್ನ ಜತೆ ಬಂದಿದ್ದ ಎಂದು ಆರೋಪ ಮಾಡಿರುವ ಮಹಿಳೆ, ಶಾಸಕ 2016ರಿಂದ 2018ರ ಅವಧಿಯಲ್ಲಿ ಅತ್ಯಾಚಾರ ಎಸಗಿದ್ದರು ಎಂದು ವಿವರ ನೀಡಿದ್ದಾರೆ. ಸಂತ್ರಸ್ತೆ ಮಹಿಳೆ 2016ರಲ್ಲಿ ತಾಯಿ ಅಸ್ವಸ್ಥರಾಗಿದ್ದ ಸಂದರ್ಭದಲ್ಲಿ ಶಾಸಕರನ್ನು ಭೇಟಿ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. ಈ ವಿಷಯವನ್ನು ಬಾಯಿ ಬಿಡದಂತೆ ಶಾಸಕರ ಪತ್ನಿ 25 ಲಕ್ಷ ರೂಪಾಯಿ ಆಮಿಷ ಒಡ್ಡಿದ್ದರು ಎಂದೂ ಮಹಿಳೆ ಆಪಾದಿಸಿದ್ದಾರೆ.
ಈ ಮಧ್ಯೆ ಶಾಸಕರ ಪತ್ನಿ, ಮಹಿಳೆ ವಿರುದ್ಧ ದೂರು ನೀಡಿ ತನ್ನ ಪತಿಯನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾಳೆ ಎಂದು ಆಪಾದಿಸಿದ್ದಾರೆ. ಈ ಬಗ್ಗೆ ನೆಹರೂ ಕಾಲನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.









