ಆರ್ ಪಿಸಿಎ . ಇದು ಅಂಪೈರ್ ಭಟ್ರ ಕನಸಿನ ಕೂಸು…!
ವೃತ್ತಿಗೆ ಕೊರೊನಾ ಶಾಪವಾಯ್ತು,,, ಹೊಸ ಸಾಹಸಕ್ಕೆ ವರವಾಯ್ತು…!
ಬೆಂಗಳೂರು ಟು ಕಾರ್ಕಳ.. ಇದು ಭಟ್ರ ಕೊರೋನಾ ಜರ್ನಿ…!
ರಾಘವೇಂದ್ರ ಪ್ರಭು..
ಪ್ರೀತಿಯಿಂದ ಭಟ್ರು ಅಂತ ಕರೆಯುತ್ತೇವೆ. ಹಾಗಾದ್ರೆ ಈ ಭಟ್ರು ಯಾರು ? ಎಲ್ಲಿಯವರು ? ಏನು ಮಾಡುತ್ತಾರೆ ? ಅನ್ನೋ ಪ್ರಶ್ನೆಗಳಿಗೆ ಸ್ಪಷ್ಟವಾದ ಉತ್ತರ ಸಿಗಬೇಕಾದ್ರೆ ಬೆಂಗಳೂರು ಕ್ರಿಕೆಟ್ ವಲಯದಲ್ಲಿ ಕೇಳಬೇಕು.
ಹೌದು, ರಾಘವೇಂದ್ರ ಪ್ರಭು.. ಕೇವಲ ಬೆಂಗಳೂರು ಕ್ರಿಕೆಟ್ ವಲಯದಲ್ಲಿ ಚಿರಪರಿಚಿತರಲ್ಲ. ಬದಲಾಗಿ ಮಾಧ್ಯಮ ಮಿತ್ರರ ಜೊತೆಗೂ ಉತ್ತಮ ಭಾಂಧವ್ಯವನ್ನು ಹೊಂದಿದ್ದಾರೆ.
ಕ್ರಿಕೆಟ್ ಮೇಲಿನ ಪ್ರೀತಿಯಿಂದ ಕ್ರಿಕೆಟ್ ಅನ್ನೇ ನಂಬಿ ಜೀವನ ಸಾಗಿಸುತ್ತಿದ್ದವರಲ್ಲಿ ರಾಘವೇಂದ್ರ ಪ್ರಭು ಕೂಡ ಒಬ್ಬರು. ಬೆಂಗಳೂರಿನ ಪ್ರತಿಷ್ಠಿತ ಬ್ರಿಜೆಶ್ ಕ್ರಿಕೆಟ್ ಅಕಾಡೆಮಿಯಲ್ಲಿ (ಬಿಪಿಸಿಎಲ್) ಸುಮಾರು 20 ವರ್ಷಗಳಿಂದ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅದೇ ರೀತಿ ಕೆಎಸ್‍ಸಿಎ ಲೀಗ್ ಟೂರ್ನಿಗಳಲ್ಲಿ ಅಂಪೈರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಜೊತೆಗೆ ಟಿವಿ ಮಾಧ್ಯಮಗಳಲ್ಲಿ ಕ್ರಿಕೆಟ್ ವಿಶ್ಲೇಷಣೆ ಕೂಡ ಮಾಡುತ್ತಾ ಬಂದಿದ್ದಾರೆ ನಮ್ಮ ಭಟ್ರು. ಕಳೆದ ಐಪಿಎಲ್ ವೇಳೆ ನಮ್ಮ ಸಾಕ್ಷಾ ಟಿವಿ.ಡಾಟ್ ಕಾಮ್ ನ ಫೇಸ್ ಬುಕ್ ಲೈವ್ ಸೂಪರ್ ಓವರ್ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಬಂದು ಪಂದ್ಯಗಳ ವಿಶ್ಲೇಷಣೆಯನ್ನು ಮಾಡಿದ್ದಾರೆ.
ಎಲ್ಲರ ಜೊತೆ ಸ್ನೇಹ ಜೀವಿಯಾಗಿ ಭಾಂಧವ್ಯ ವನ್ನು ಹೊಂದಿದ್ದ ಪ್ರಭು ಅವರು, ಅನೇಕ ಯುವ ಕ್ರಿಕೆಟ್ ಆಟಗಾರರ ಬದುಕಿಗೆ ಬೆಳಕಾಗಿದ್ದಾರೆ. ಯುವ ಪ್ರತಿಭೆಗಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಪ್ರೇರಣೆ ಮತ್ತು ಸ್ಪೂರ್ತಿ ಕೂಡ ತುಂಬಿದ್ದಾರೆ. ಹೀಗೆ ಕ್ರಿಕೆಟ್ ಕೋಚಿಂಗ್, ಅಂಪೈರ್ ಆಗಿ ಜೀವನವನ್ನು ಸಾಗಿಸುತ್ತಿದ್ದರು.
ಆದ್ರೆ ಕೊರೋನಾ ಮಹಾಮಾರಿ ಹೊಡೆತಕ್ಕೆ ರಾಘವೇಂದ್ರ ಪ್ರಭು ಅವರ ಬದುಕು ಕೂಡ ಜರ್ಜರಿತಗೊಂಡಿತ್ತು. ಲಾಕ್ ಡೌನ್ ನಿಂದಾಗಿ ಕೋಚಿಂಗ್ ಅಕಾಡೆಮಿ ಇಲ್ಲ. ಕ್ಲಬ್ ಟೂರ್ನಿಗಳು ನಡೆಯದ ಕಾರಣ ಅಂಪೈರಿಂಗ್ ಇಲ್ಲ. ಹೀಗೆ ಜೀವನ ಸಾಗಿಸುವುದೇ ಕಷ್ಟಕರವಾಗುವಂತಹ ಪರಿಸ್ಥಿತಿ ನಿರ್ಮಾಣವಾಯ್ತು.
ಆತ್ಮೀಯ ಗೆಳೆಯರು ಆರ್ಥಿಕ ಸಹಾಯ ಮಾಡಿದ್ರೂ ಕೂಡ ಎಷ್ಟು ದಿನ ಅವರ ಸಹಾಯದಲ್ಲಿ ಜೀವನ ಸಾಗಿಸುವುದು ಅನ್ನೋ ಕೊರಗು ಪ್ರಭು ಅವರನ್ನು ಕಾಡಲು ಶುರು ಮಾಡಿತ್ತು. ಆದ್ರೆ ಎದೆಗುಂದಲಿಲ್ಲ. ಧೈರ್ಯವನ್ನು ಕಳೆದುಕೊಳ್ಳುವುದಿಲ್ಲ. ಕಲಿತ ವಿದ್ಯೆ ಮತ್ತು ತನ್ನಲ್ಲಿರುವ ಪ್ರತಿಭೆಯನ್ನೇ ಅಸ್ತ್ರವನ್ನಾಗಿಸಿಕೊಂಡ್ರು.
ಆದ್ರೆ ಅದು ಬೆಂಗಳೂರಿನಲ್ಲಿ ಸಾಧ್ಯವಾಗುವುದು ಕಷ್ಟ ಅಂತ ಪ್ರಭು ಅವರಿಗೆ ಚೆನ್ನಾಗಿ ಗೊತ್ತಿತ್ತು. ಯಾಕಂದ್ರೆ ಆರ್ಥಿಕ ಸಮಸ್ಯೆ ಮತ್ತು ಒತ್ತಡ, ಆತಂಕದಿಂದ ಬದುಕು ಕಲ್ಪಿಸಿದ್ದ ಬೆಂಗಳೂರು ನಗರವನ್ನು ಭಾರವಾದ ಮನಸ್ಸಿನಿಂದ ಬಿಟ್ಟು ,ತನ್ನೂರಾದ ಕಾರ್ಕಳವನ್ನು ಸೇರಿಕೊಂಡ್ರು.
ತನ್ನ ಆತ್ಮೀಯ ಸ್ನೇಹಿತರ ಸಲಹೆಯಂತೆ ಕಾರ್ಕಳದಲ್ಲಿ ಆರ್ ಪಿಸಿಎ ಅಂದ್ರೆ ರಶ್ಮಿ ಪ್ರಭು ಕ್ರಿಕೆಟ್ ಅಕಾಡೆಮಿಗೆ ಚಾಲನೆ ನೀಡಿದ್ರು. ಕಳೆದ ಗಣೇಶ ಹಬ್ಬದಂದು ಆರ್‍ಪಿಸಿಎ ಕ್ರಿಕೆಟ್ ಅಕಾಡೆಮಿ ಶುರುವಾದ್ರೂ ಲಾಕ್ ಡೌನ್ ಮತ್ತು ಕೋವಿಡ್19ನಿಂದಾಗಿ ಅಕಾಡೆಮಿಯ ಚಟುವಟಿಕೆಗಳು ಆರಂಭವಾಗಲಿಲ್ಲ. ಅಲ್ಲದೆ ಕಾರ್ಕಳದಲ್ಲಿ ಯಾವುದೇ ರೀತಿಯ ಆಧುನಿಕ ಮಾದರಿಯ ಸವಲತ್ತುಗಳು ಇರಲಿಲ್ಲ. ಕಾರ್ಕಳದಲ್ಲಿ ಪ್ರಭು ಅವರಿಗೆ ಒಂದು ಮೈದಾನ ಬಿಟ್ರೆ ಬೇರೆ ಏನು ಇಲ್ಲ.
ಆರಂಭದಲ್ಲಿ ಐದಾರು ಮಂದಿಗೆ ಫಿಟ್ ನೆಸ್ ತರಬೇತಿಯನ್ನು ನೀಡುತ್ತಿದ್ದರು. ಬಳಿಕ ಸಂಖ್ಯೆ ಏರುತ್ತಾ ಹೋಯ್ತು. ಭಟ್ಟರ ಫಿಟ್ ನೆಸ್ ತರಬೇತಿಗೆ ಪ್ರೇರಣೆಗೊಂಡ ಸ್ಥಳಿಯರು ಕೂಡ ಸಾಥ್ ನೀಡಿದ್ರು. ಹೀಗೆ 15-20 ಮಂದಿಗೆ ಫಿಟ್ ನೆಸ್ ತರಬೇತಿಯ ಜೊತೆ ವಾರಾಂತ್ಯಕ್ಕೆ ಎಂಟು ಹತ್ತು ಕಿಲೋ ಮೀಟರ್ ಕ್ರಾಸ್ ಕಂಟ್ರಿ ಓಟ, ಕಾಡು, ಜಲಪಾತಗಳಿಗೆ ಟ್ರಕ್ಕಿಂಗ್ ಹೋಗುವ ಮೂಲಕ ತನ್ನ ವಿದ್ಯಾರ್ಥಿಗಳಿಗೆ ಮಾನಸಿಕ ಮತ್ತು ದೈಹಿಕವಾಗಿ ಸ್ಪೂರ್ತಿ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ.
ಇದೀಗ ಕ್ರಿಕೆಟ್ ಆಟದ ಗ್ರಾಮರ್ ಗಳನ್ನು ಭಟ್ರು ಹೇಳಿಕೊಡುತ್ತಿದ್ದಾರೆ.
ಹಳೆಯ ಟಯರ್, ಕಣ್ಣಿಗೆ ಕಾಣುವ ಕೆಲವೊಂದು ಹಳೆಯ ವಸ್ತುಗಳನ್ನು ಬಳಕೆ ಮಾಡಿಕೊಂಡು ನಮ್ಮ ಪ್ರಭು ಅವರು ಫಿಟ್ ನೆಸ್ ಮತ್ತು ಕ್ರಿಕೆಟ್ ಗ್ರಾಮರ್ ಗಳನ್ನು ಹೇಳಿಕೊಡುತ್ತಿದ್ದಾರೆ.
ಕಾರ್ಕಳದಲ್ಲಿ ದೊಡ್ಡ ಕ್ರೀಡಾಂಗಣವಿದೆ. ಆದ್ರೆ ಆಧುನಿಕ ಸೌಲಭ್ಯಗಳ ಕೊರತೆ ಇದೆ. ಈಗಾಗಲೇ ಪ್ರಭು ಅವರ ಕ್ರಿಕೆಟ್ ಅಕಾಡೆಮಿಗೆ ಕ್ರಿಕೆಟ್ ಪಿಚ್ ನ ಅವಶ್ಯಕತೆ ಇದೆ. ಸ್ಥಳೀಯ ಶಾಸಕರು ಪಿಚ್ ನಿರ್ಮಾಣ ಮಾಡಿಕೊಡುವ ಭರವಸೆ ಕೂಡ ನೀಡಿದ್ದಾರೆ.
ಇನ್ನು ಪ್ರಭು ಅವರು ತಮ್ಮನ್ನು ಕೇವಲ ಕ್ರಿಕೆಟ್ ಕೋಚಿಂಗ್ ಅಥವಾ ಫಿಟ್ ನೆಸ್‍ಗೆ ಮಾತ್ರ ಸೀಮಿತಗೊಳಿಸಿಲ್ಲ. ಸ್ಥಳೀಯ ಸಂಘ ಸಂಸ್ಥೆಗಳ ಜೊತೆಗೂ ಒಡನಾಟ ಬೆಳೆಸಿಕೊಂಡು ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.
ಬೆಳಗ್ಗೆ ಮತ್ತು ಸಂಜೆ ಅಂದ್ರೆ ಪ್ರತಿ ದಿನ ಸುಮಾರು ಆರು ಗಂಟೆಗಳ ಕಾಲ ಮೈದಾನದಲ್ಲೇ ಯುವ ಪ್ರತಿಭೆಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ಒಟ್ಟಿನಲ್ಲಿ ಭಟ್ರು ಹೇಳುವಂತೆ ಕೊರೋನಾ ಶಾಪವೂ ಹೌದು.. ವರವೂ ಹೌದು. ಬದುಕನ್ನು ರೂಪಿಸಿಕೊಳ್ಳಲು ಕೊರೋನಾ ಪಾಠ ಕಲಿಸಿತ್ತು ಅಂತ ಭಟ್ರು ತನ್ನ ಸಂಕಷ್ಟದ ಸಮಯದಲ್ಲಿ ತಾನು ಅನುಭವಿಸಿದ ಯಾತನೆಯನ್ನು ಹೇಳಿಕೊಳ್ಳುತ್ತಾರೆ. ಆದ್ರೆ ಈಗ ಊರಿನಲ್ಲಿ ನೆಮ್ಮದಿಯ ಜೀವನವನ್ನು ಸಾಗಿಸುತ್ತಿದ್ದೇನೆ ಎನ್ನುವ ಭಟ್ರು, ನಾನು ದುಡ್ಡಿನ ಆಸೆಗಾಗಿ ಅಕಾಡೆಮಿಯನ್ನು ಶುರು ಮಾಡಿಲ್ಲ. ಅಂತಹ ಆಸೆಯೂ ನನಗಿಲ್ಲ. ಜೀವನ ಸಾಗಿಸಬೇಕು. ಬದುಕಿನಲ್ಲಿ ಏನಾದ್ರೂ ಮಾಡಬೇಕು ಅನ್ನೋ ಕನಸನ್ನು ಇಟ್ಟುಕೊಂಡು ಅಕಾಡೆಮಿಯನ್ನು ಆರಂಭಿಸಿದ್ದೇನೆ. ಎಲ್ಲವೂ ದೇವರ ಇಚ್ಛೆ ಅಂತ ಹೇಳುತ್ತಾರೆ.
ಯಾಕಂದ್ರೆ ರಾಘವೇಂದ್ರ ಭಟ್ರು ದೇವರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿದ್ದಾರೆ. ಪ್ರತಿ ದಿನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುತ್ತಾರೆ. ಜೊತೆಗೆ ಪಂದ್ಯ ನಡೆದಾಗ ಆಟಗಾರರಿಗೂ ಪ್ರಸಾದ ತಂದುಕೊಡುತ್ತಾರೆ. ಅದಕ್ಕೆ ಮೊದಲೇ ಹೇಳಿದ್ದು ಭಟ್ರು ಬೆಂಗಳೂರು ಕ್ರಿಕೆಟ್ ವಲಯದಲ್ಲಿ ಚಿರಪರಿಚಿತರು ಅಂತ. ಇನ್ನೊಂದು ವಿಶೇಷತೆ ಪ್ರಭು ಅವರ ಹಣೆಯಲ್ಲಿ ಯಾವಾಗಲೂ ಕುಂಕುಮವಿರುತ್ತದೆ. ಅದು ಅವರ ನಂಬಿಕೆ. ದೇವರ ಮೇಲಿರುವ ವಿಶ್ವಾಸ.
ಏನೇ ಆಗ್ಲಿ, ರಾಘವೇಂದ್ರ ಪ್ರಭು ಅವರು ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಕಾರ್ಕಳ ಅನ್ನೋ ಗ್ರಾಮೀಣ ಪ್ರದೇಶದಲ್ಲಿ ಕ್ರಿಕೆಟ್ ಅಕಾಡೆಮಿಯಿಂದ ಮುಂಬರುವ ದಿನಗಳಲ್ಲಿ ಯುವ ಕ್ರಿಕೆಟಿಗರು ರೂಪುಗೊಳ್ಳಲಿ ಅನ್ನೋದೇ ನಮ್ಮ ಹಾರೈಕೆ.