ಸದಾ ನಗುಮುಖದಿಂದಲೇ ಎಲ್ಲರ ಮನಸ್ಸು ಗೆದ್ದಿರುವ ರಶ್ಮಿಕಾ ಮಂದಣ್ಣ ಇದೀಗ ತೀವ್ರವಾಗಿ ಗರಂ ಆಗಿದ್ದಾರೆ. ಸಿನಿಮಾ ರಂಗಕ್ಕೆ ಕಾಲಿಟ್ಟಾಗಿನಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್, ನೆಗೆಟಿವ್ ಕಮೆಂಟ್ ಗಳನ್ನು ಎದುರಿಸುತ್ತಿರುವ ಅವರು, ಇದೇ ಮೊದಲ ಬಾರಿಗೆ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. ತಮ್ಮ ಬಗ್ಗೆ ಏನೇ ಮಾತನಾಡಿದರೂ ಮೌನವಾಗಿದ್ದ ನಟಿ, ಇದೀಗ ತಮ್ಮ ಕುಟುಂಬವನ್ನು ಈ ವಿವಾದಗಳಿಗೆ ಎಳೆದು ತಂದಿರುವವರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ವೈರಲ್ ಆಡಿಯೋ ಹಿಂದಿನ ಅಸಲಿಯತ್ತು ಬಿಚ್ಚಿಟ್ಟ ನಟಿ
ಇತ್ತೀಚೆಗಷ್ಟೇ ರಶ್ಮಿಕಾ ಅವರ ತಾಯಿ ಸುಮನ್ ಮಂದಣ್ಣ ಅವರದ್ದು ಎನ್ನಲಾದ ಆಡಿಯೋ ತುಣುಕೊಂದು ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ವಿಚಾರವಾಗಿ ಸೋಷಿಯಲ್ ಮೀಡಿಯಾ ಹಾಗೂ ಮಾಧ್ಯಮಗಳಲ್ಲಿ ದೊಡ್ಡ ಮಟ್ಟದ ಚರ್ಚೆಗಳು ಶುರುವಾಗಿದ್ದವು. ಇದು ರಶ್ಮಿಕಾ ಅವರ ಆಕ್ರೋಶಕ್ಕೆ ಪ್ರಮುಖ ಕಾರಣವಾಗಿದೆ. ಸುಮಾರು ಎಂಟು ವರ್ಷಗಳ ಹಿಂದಿನ, ತೀರಾ ಖಾಸಗಿಯಾದ ಸಂಭಾಷಣೆಯನ್ನು ಸಂಬಂಧಪಟ್ಟವರ ಅನುಮತಿ ಇಲ್ಲದೆ ರೆಕಾರ್ಡ್ ಮಾಡಿ, ಈಗ ಬೇಕೆಂದೇ ಅದರ ಒಂದು ಸಣ್ಣ ತುಣುಕನ್ನು ಮಾತ್ರ ಕಟ್ ಮಾಡಿ ವೈರಲ್ ಮಾಡಲಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ.
ಸುಳ್ಳು ಸುದ್ದಿಗಳ ವಿರುದ್ಧ ಬೇಸರ
ಈ ಕುರಿತು ಟ್ವಿಟರ್ (ಎಕ್ಸ್) ನಲ್ಲಿ ಸುದೀರ್ಘವಾದ ಪತ್ರವೊಂದನ್ನು ಬರೆದು ಹಂಚಿಕೊಂಡಿರುವ ಅವರು, ಕಳೆದ ಎಂಟು ವರ್ಷಗಳಿಂದ ಮಾಧ್ಯಮಗಳ ಒಂದು ವರ್ಗ ಹಾಗೂ ಕೆಲ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಸುಳ್ಳು ಮಾಹಿತಿ ಹಾಗೂ ದ್ವೇಷ ಹರಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ತಾವು ಆಡದ ಮಾತುಗಳನ್ನು ತಿರುಚಿ, ಕೇವಲ ವೀಕ್ಷಣೆ (ವ್ಯೂವ್ಸ್) ಹಾಗೂ ಎಂಗೇಜ್ಮೆಂಟ್ ಗಾಗಿ ಸುಳ್ಳು ಕಥೆಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಸಾರ್ವಜನಿಕ ಜೀವನದಲ್ಲಿರುವ ಕಾರಣ ಇಂತಹ ಟೀಕೆಗಳನ್ನು ಸಹಿಸಿಕೊಳ್ಳಲೇಬೇಕು ಎಂದು ಇಷ್ಟು ದಿನ ಸುಮ್ಮನಿದ್ದೆ, ಆದರೆ ಈಗ ಆ ಮಿತಿ ಮೀರಿದೆ ಎಂದು ಅವರು ಎಚ್ಚರಿಸಿದ್ದಾರೆ.
24 ಗಂಟೆಗಳ ಗಡುವು, ಕಠಿಣ ಕಾನೂನು ಕ್ರಮದ ಎಚ್ಚರಿಕೆ
ತಮ್ಮ ಹಾಗೂ ತಮ್ಮ ಕುಟುಂಬದವರ ನೆಮ್ಮದಿ ಕದಡುವ ಮಟ್ಟಕ್ಕೆ ಇಳಿದಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಶ್ಮಿಕಾ ನಿರ್ಧರಿಸಿದ್ದಾರೆ. ತಮ್ಮ ಬಗ್ಗೆ ಸುಳ್ಳು ಸುದ್ದಿ, ವಿವಾದಾತ್ಮಕ ಕಂಟೆಂಟ್ ಹಂಚಿಕೊಂಡಿರುವ ಮಾಧ್ಯಮ ಸಂಸ್ಥೆಗಳು, ಡಿಜಿಟಲ್ ಪ್ಲಾಟ್ ಫಾರ್ಮ್ ಗಳು ಹಾಗೂ ಇನ್ ಫ್ಲುಯೆನ್ಸರ್ ಗಳಿಗೆ ಕೇವಲ 24 ಗಂಟೆಗಳ ಗಡುವು ನೀಡಿದ್ದಾರೆ. ಈ ಕಾಲಾವಕಾಶದೊಳಗೆ ಆ ಎಲ್ಲಾ ಕಂಟೆಂಟ್ ಗಳನ್ನು ಡಿಲೀಟ್ ಮಾಡದೇ ಇದ್ದರೆ, ಮಾನನಷ್ಟ ಮೊಕದ್ದಮೆ ಹಾಗೂ ಖಾಸಗಿತನದ ಉಲ್ಲಂಘನೆ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸುವುದಾಗಿ ನೇರ ಎಚ್ಚರಿಕೆ ನೀಡಿದ್ದಾರೆ. ಈ ನಿರ್ಧಾರವನ್ನು ತಾವು ಹಗುರವಾಗಿ ತೆಗೆದುಕೊಳ್ಳುತ್ತಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ನನ್ನ ಜೀವನ ನನ್ನ ನಿರ್ಧಾರ
ತಮ್ಮ ವೈಯಕ್ತಿಕ ಜೀವನದ ನಿರ್ಧಾರಗಳನ್ನು ತೆಗೆದುಕೊಳ್ಳಲು ತಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಬೇರೆಯವರು ತಮ್ಮ ಜೀವನ ಹೇಗಿರಬೇಕು ಎಂದು ನಿರ್ಧರಿಸಲು ಸಾಧ್ಯವಿಲ್ಲ ಎಂದು ರಶ್ಮಿಕಾ ತಿರುಗೇಟು ನೀಡಿದ್ದಾರೆ. ಜೊತೆಗೆ ಇಷ್ಟು ವರ್ಷಗಳ ಕಾಲ ತಮ್ಮ ಬೆಂಬಲಕ್ಕೆ ನಿಂತ ಅಭಿಮಾನಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಸದ್ಯ ರಶ್ಮಿಕಾ ಅವರ ಈ ದಿಟ್ಟ ಹೆಜ್ಜೆಗೆ ಅವರ ಅಭಿಮಾನಿಗಳಿಂದ ಹಾಗೂ ಸಾರ್ವಜನಿಕ ವಲಯದಿಂದ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.








