ಸಿನಿಮಾ ಜಗತ್ತಿಗೆ ಕಾಲಿಟ್ಟಾಗಿನಿಂದಲೂ ಬ್ಯಾಕ್ ಟು ಬ್ಯಾಕ್ ಸಿನಿಮಾ ಚಿತ್ರೀಕರಣಗಳಲ್ಲಿ ಬಿಜಿಯಾಗಿದ್ದ ಕಿರಿಕ್ ಹುಡ್ಗಿ ರಶ್ಮಿಕಾ ಮಂದಣ್ಣ ಈಗ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ಕೊಡಗಿನಲ್ಲಿರುವ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವ ಅವರು, ಇಷ್ಟು ಸುದೀರ್ಘ ಸಮಯ ನಿರಂತರವಾಗಿ ಮನೆಯವರೊಂದಿಗೆ ಕಾಲ ಕಳೆದಿದ್ದೇ ಇಲ್ಲ ಎಂದು ರಶ್ಮಿಕಾ ತಿಳಿಸಿದ್ದಾರೆ.
ಇನ್ ಸ್ಟಾಗ್ರಾಂನಲ್ಲಿ ಫೋಟೊಗಳನ್ನು ಹಂಚಿಕೊಳ್ಳುತ್ತಿರುವ ರಶ್ಮಿಕಾ, ತಮ್ಮ ಜೀವನದ ಅನುಭವಗಳು, ಅನಿಸಿಕೆಗಳನ್ನು ಬರಹದ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. “18ನೇ ವರ್ಷಕ್ಕೆ ಕಾಲಿರಿಸಿದ್ದಾಗಿನಿಂದ ನನ್ನ ಬದುಕು ಮ್ಯಾರಥಾನ್ ರೀತಿ ಆಗಿದೆ. ಓಟದಲ್ಲಿ ಕೊನೆಯ ಗುರಿ ಮುಟ್ಟಿದೆ ಎಂದು ಯೋಚಿಸುವಾಗಲೇ ಮತ್ತೊಮ್ಮೆ ರೇಸ್ ಶುರುವಾಗುತ್ತಿದೆ. ನಾನು ಇದರ ಬಗ್ಗೆ ಆರೋಪ ಮಾಡುತ್ತಿಲ್ಲ. ಏಕೆಂದರೆ ಇದನ್ನೇ ಯಾವಾಗಲೂ ಬಯಸುತ್ತಿದ್ದೆ. ಪ್ರಾಮಾಣಿಕವಾಗಿ ಹೇಳುವುದಾದರೆ ನನ್ನ ಜೀವನದಲ್ಲಿ ಇಷ್ಟೊಂದು ಸುದೀರ್ಘ ಕಾಲ ನಾನು ಮನೆಯಲ್ಲಿ ಇರಲೇ ಇಲ್ಲ. ಶಾಲೆಯಿಂದ ಉನ್ನತ ಶಿಕ್ಷಣದವರೆಗೂ ನಾನು ಯಾವಾಗಲೂ ಹಾಸ್ಟೆಲ್ ನಲ್ಲಿಯೇ ಇರುತ್ತಿದ್ದೆ. ನನ್ನ ಪೋಷಕರು ಬಹಳ ಸ್ಟ್ರಿಕ್ಟ್ ಎಂದು ಹಲವು ಬಾರಿ ಅಂದುಕೊಂಡಿದ್ದೆ. ಆದರೆ ವಾಸ್ತವವಾಗಿ ತಾರುಣ್ಯದಲ್ಲಿ ನಾನೇ ರೆಬೆಲ್ ಆಗಿದ್ದವಳು” ಎಂದು ರಶ್ಮಿಕಾ ಹೇಳಿದ್ದಾರೆ.
ಇದಲ್ಲದೇ ಈ ಲಾಕ್ ಡೌನ್ ಸಮಯದಲ್ಲಿ ತನ್ನ ಸುತ್ತಲೂ ನಡೆಯುತ್ತಿರುವ ಘಟನೆಗಳೊಂದಿಗೆ ಸಹಕರಿಸಲು ನನ್ನ ಪುಟ್ಟ ತಂಗಿ ಪ್ರಯತ್ನಿಸುತ್ತಿದ್ದಾಳೆ. ಎರಡು ತಿಂಗಳಿಗೂ ಹೆಚ್ಚು ಸಮಯವನ್ನು ಕಳೆದೆ. ಇದು ಬಹಳ ಸುದೀರ್ಘ ಸಮಯ. ಈ ಸಮಯದಲ್ಲಿ ನಾನು ಕೆಲಸದ ಕುರಿತು ಹೆಚ್ಚು ಮಾತನಾಡಲಿಲ್ಲ. ಅವರೆಲ್ಲರ ಕಾಳಜಿ ಇದ್ದದ್ದು ನನ್ನ ಮೇಲೆ. ಎಲ್ಲವನ್ನೂ ಎದುರಿಸಲು ಅವರು ನನಗೆ ಶಕ್ತಿ ತುಂಬಿದ್ದಾರೆ. ಇದು ನನ್ನ ಖುಷಿಯ ಅವಧಿ ಎಂದಿರುವ ರಶ್ಮಿಕಾ, ಮನೆಯಲ್ಲಿಯೇ ಇದ್ದಾಗ ಪ್ರಶಾಂತ, ಸಂತೋಷ ಮತ್ತು ನೆಮ್ಮದಿ ಇರುತ್ತದೆ ಎಂದು ನಾನು ಎಂದಿಗೂ ಯೋಚಿಸಿಯೇ ಇರಲಿಲ್ಲ. ಆದರೆ ನಂಬಿ, ಕುಟುಂಬ ಎಂದರೆ ಮನೆ. ಸುದೀರ್ಘ ಕಾಲದ ಕೆಲಸದ ನಂತರ ಮನೆಗೆ ಮರಳಿದ್ದರೆ ಬಹುದೊಡ್ಡ ಶಾಂತಿಯ ಅನುಭವ ಸಿಗುತ್ತದೆ ಎಂದು ತಮ್ಮ ಇನ್ ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.








