ಚಿಕ್ಕಮಗಳೂರು : ಸಚಿವ ಸಿ.ಟಿ ರವಿ ಅವರಿಗೆ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆ ಅವರು ಹೋ ಕ್ವಾರಂಟೈನ್ ನಲ್ಲಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರ ತಿಳಿಸಿದ್ದರು. ಇದಕ್ಕೆ ತಿರುಗೇಟು ನೀಡುವಂತೆ ಟ್ವೀಟ್ ಮಾಡಿದ್ದ ಸಿ.ಟಿ ರವಿ, ನಾಣು ಚೆನ್ನಾಗಿದ್ದೇನೆ, ಕೊರೊನಾ ಲಕ್ಷಣ ಇಲ್ಲ, ಮನೆಯಲ್ಲಿ ವಾಕ್ ಮಾಡುತ್ತಿದ್ದೇನೆ ಎಂದಿದ್ದರು.
ಈ ಬಗ್ಗೆ ಬೆಂಗಳೂರಿನಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸುಧಾಕರ್, ‘ನನಗೆ ದೊರೆತಿರುವ ಮಾಹಿತಿಯಂತೆ ರವಿ ಅವರಿಗೆ ಎ ಸಿಮ್ಟಮ್ಯಾಟಿಕ್ ಇದೆ. ಅದಕ್ಕಾಗಿ ಮನೆ ಕ್ವಾರಂಟೈನ್‌ನಲ್ಲಿದ್ದಾರೆ’ ಎಂದರು.
ಈ ವಿಚಾರವಾಗಿ ಮಾತನಾಡಿರುವ ಸಿ.ಟಿ ರವಿ, ‘ಕೋವಿಡ್ ಪರೀಕ್ಷೆಗೆ ಇದೇ 10 ರಂದು ಮಾದರಿ ನೀಡಿದ್ದೆ. ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ಅವರು ವರದಿ ನೋಡಿ ಸೋಂಕು ದೃಢಪಟ್ಟಿರುವ ಬಗ್ಗೆ ಹೇಳಿಕೆ ನೀಡಿರಬಹುದು. ಸೋಂಕು ದೃಢಪಟ್ಟಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ವರದಿ ತರಿಸಿಕೊಂಡು ನೋಡುತ್ತೇನೆ. ಇದೇ 6ರಂದು ಪರೀಕ್ಷೆ ಮಾಡಿಸಿದ್ದೆ, ಆಗ ನೆಗೆಟಿವ್ ಬಂದಿತ್ತು’ ಎಂದು ಪ್ರತಿಕ್ರಿಯಿಸಿದರು. ಅಲ್ಲದೆ ‘ಕೋವಿಡ್ ಸೋಂಕಿನ ಯಾವುದೇ ಲಕ್ಷಣಗಳೂ ಇಲ್ಲ. ನಗರದ ರಾಮನಹಳ್ಳಿಯ ಫಾರ್ಮ್ಹೌಸ್‌ನಲ್ಲಿ ಹೋಂ ಕ್ವಾರಂಟೈನ್‌ನಲ್ಲಿ ಇದ್ದೇನೆ’ ಎಂದರು.