ಧೋನಿ ಎಂಟ್ರಿಗೆ ರವಿಶಾಸ್ತ್ರಿ ಗಪ್ ಚುಪ್.. ಇದು ದಾದಾ ಮಹಿಮೆ
ಟೀಮ್ ಇಂಡಿಯಾದ ಗರ್ಭಗುಡಿಯಲ್ಲಿ ಈಗ ಮಹೇಂದ್ರ ಸಿಂಗ್ ಧೋನಿಯವರದ್ದೇ ಮಹಿಮೆ. 2021ರ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾದ ಮೆಂಟರ್ ಆಗಿರುವ ಧೋನಿ ತನ್ನೆಲ್ಲಾ ಅನುಭವಗಳನ್ನು ಧಾರೆ ಎರೆಯುತ್ತಿದ್ದಾರೆ. ತಂಡದ ಎಲ್ಲಾ ಆಟಗಾರರಿಗೂ ಸಲಹೆ ಮಾರ್ಗದರ್ಶನಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಧೋನಿ ಆಗಮನದಿಂದಾಗಿ ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್ ನ ವಾತಾವರಣವೇ ಬದಲಾಗಿದೆ. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಎಲ್ಲಾ ಆಟಗಾರರು ಹೊಸ ಹುರುಪಿಲ್ಲಿದ್ದಾರೆ.
ಅಂದ ಹಾಗೇ ಧೋನಿ ಮೆಂಟರ್ ಆಗಿರುವುದರಿಂದ ಹೆಡ್ ಕೋಚ್ ರವಿಶಾಸ್ತ್ರಿಯವರ ಕೆಲಸ ಸುಲಭವಾಗಿದೆ. ಅಷ್ಟೇ ಅಲ್ಲ ರವಿರಾಸ್ತ್ರಿ ಸಂಪೂರ್ಣವಾಗಿ ಮಂಕಾದಂತೆ ಭಾಸವಾಗುತ್ತಿದೆ. ಕಳೆದ ಎರಡು ಅವಧಿಗಳಲ್ಲಿ ಹೆಡ್ ಕೋಚ್ ಆಗಿದ್ದ ರವಿಶಾಸ್ತ್ರಿ ಟಿ-ಟ್ವೆಂಟಿ ವಿಶ್ವಕಪ್ ನಲ್ಲಿ ತಂಡದ ಮೇಲಿನ ಹಿಡಿತವನ್ನು ಕಳೆದುಕೊಳ್ಳುತ್ತಿದ್ದಾರೆ. ಹಾಲಿ ತಂಡದ ಬಹುತೇಕ ಆಟಗಾರರು ಧೋನಿಯ ಜೊತೆ ಪಳಗಿದವರು. ಹೀಗಾಗಿ ಧೋನಿಯ ಮಾತೇ ಜಾಸ್ತಿ ನಡೆಯುತ್ತಿದೆ.
ಅಷ್ಟಕ್ಕೂ ರವಿಶಾಸ್ತ್ರಿ ಮಂಕಾಗಿರುವುದಕ್ಕೆ ಮೂಲ ಕಾರಣ ಬಿಸಿಸಿಐ ಬಿಗ್ ಬಾಸ್ ಸೌರವ್ ಗಂಗೂಲಿ. ಯಾಕಂದ್ರೆ ರವಿಶಾಸ್ತ್ರಿ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿರುವುದು ಸೌರವ್ ಗಂಗೂಲಿಗೆ ಇಷ್ಟವೂ ಇರಲಿಲ್ಲ. ಮೊದಲ ಅವಧಿಯಲ್ಲಿ ರವಿಶಾಸ್ತ್ರಿ ಹೆಡ್ ಕೋಚ್ ಆಗಿ ನೇಮಕಗೊಂಡಾಗ ಸೌರವ್ ಗಂಗೂಲಿ ರವಿಶಾಸ್ತ್ರಿಯವರ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗಿಯಾಗಿರಲಿಲ್ಲ. ಆಗ ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ್ಮಣ್ ಅವರು ಟೀಮ್ ಇಂಡಿಯಾದ ಕೋಚ್ ಆಯ್ಕೆ ಸಮಿತಿಯಲ್ಲಿದ್ದರು.. ರವಿಶಾಸ್ತ್ರಿ ಹೆಸರು ಅಂತಿಮಗೊಳ್ಳುವಾಗ ದಾದಾ ಸಂದರ್ಶನದಿಂದ ಹಿಂದೆ ಸರಿದಿದ್ದರು.
ಮುಖ್ಯವಾಗಿ ರವಿಶಾಸ್ತ್ರಿ ಮತ್ತು ಸೌರವ್ ಗಂಗೂಲಿಯವರ ನಡುವಿನ ಮನಸ್ತಾಪಕ್ಕೆ ಕಾರಣ ಏನು ಎಂಬುದು ಗೊತ್ತಿಲ್ಲ. ಒಂದು ಮೂಲದ ಪ್ರಕಾರ, ಹಿಂದೊಮ್ಮೆ ಸೌರವ್ ಗಂಗೂಲಿ ತಡವಾಗಿ ಬಂದಿದ್ದರು ಎಂಬ ಕಾರಣಕ್ಕೆ ಬಸ್ ನಲ್ಲಿ ರವಿಶಾಸ್ತ್ರಿ ಕರೆದುಕೊಂಡು ಹೋಗಿರಲಿಲ್ಲ. ಇದು ರವಿಶಾಸ್ತ್ರಿ ಮೇಲಿನ ಸಿಟ್ಟಿಗೆ ಕಾರಣವಾಗಿತ್ತು ಎಂಬ ಮಾಹಿತಿಯೂ ಇದೆ. ಆದಾದ ನಂತರ ಸೌರವ್ ಗಂಗೂಲಿ ಅವರು, ರವಿಶಾಸ್ತ್ರಿ ಜೊತೆ ಬೆಳಗ್ಗಿನ ಹೊತ್ತು ಮಾತನಾಡಬಾರದು ಎಂದು ಹೇಳಿಕೆ ಕೂಡ ನೀಡಿದ್ದರು.
ಹೀಗಾಗಿ ರವಿಶಾಸ್ತ್ರಿಯ ಜೊತೆಗೆ ಸೌರವ್ ಗಂಗೂಲಿಯ ಸಂಬಂಧ ಚೆನ್ನಾಗಿರಲಿಲ್ಲ. ಇದೇ ಕಾರಣಕ್ಕೆ ಧೋನಿಯವರನ್ನು ಟೀಮ್ ಇಂಡಿಯಾದ ಮೆಂಟರ್ ಆಗಿ ನೇಮಕಗೊಳಿಸಿರುವುದು ಅನ್ನೋ ವಿಚಾರ ಈಗ ಗುಟ್ಟಾಗಿ ಉಳಿದಿಲ್ಲ. ಹಾಗೇ ನೋಡಿದ್ರೆ ರವಿಶಾಸ್ತ್ರಿಯ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಅದ್ಭುತವಾದ ಪ್ರದರ್ಶನವನ್ನೇ ನೀಡಿದೆ. ಟೀಮ್ ಇಂಡಿಯಾ ಗೆಲುವಿನ ಅಲೆಯಲ್ಲಿ ತೇಲಾಡುತ್ತಿದ್ರೂ ಪ್ರತಿಷ್ಠಿತ ಟೂರ್ನಿಗಳಲ್ಲಿ ಎಡವಿ ಬೀಳುತ್ತಿತ್ತು. ಇನ್ನೊಂದೆಡೆ ಟೀಮ್ ಇಂಡಿಯಾದ ಯಶಸ್ಸಿನ ಶ್ರೇಯವನ್ನು ಎನ್ ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಗೂ ಸಲ್ಲುತ್ತಿದೆ. ಯುವ ಆಟಗಾರರು ಟೀಮ್ ಇಂಡಿಯಾದ ಬಾಗಿಲು ತಟ್ಟುತ್ತಿರುವುದಕ್ಕೆ ಮುಖ್ಯ ಕಾರಣ ರಾಹುಲ್ ದ್ರಾವಿಡ್ ಎಂದು ಕೂಡ ಹೇಳಲಾಗುತ್ತಿದೆ. ಭಾರತ ಎ , 19 ವಯೋಮಿತಿಯ ಯುವ ಆಟಗಾರರನ್ನು ಟೀಮ್ ಇಂಡಿಯಾದೊಳಗೆ ಸೇರಿಕೊಳ್ಳುವಂತೆ ಮಾಡಿರುವುದು ದ್ರಾವಿಡ್.
ಒಟ್ಟಿನಲ್ಲಿ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ರವಿಶಾಸ್ತ್ರಿಯ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ತನಗೆ ಮಾಡಿರುವ ಅಪಮಾನಕ್ಕೆ ತಕ್ಕ ರೀತಿಯಲ್ಲೇ ದಾದಾ ಉತ್ತರ ನೀಡಿದ್ದಾರೆ. ಮೊದಲು ರಾಹುಲ್ ದ್ರಾವಿಡ್ ಈಗ ಧೋನಿಯವರನ್ನು ಮುಂದಿಟ್ಟುಕೊಂಡು ದಾದಾ ಶಾಸ್ತ್ರಿಗೆ ತಕ್ಕ ಎದುರೇಟು ನೀಡಿದ್ದಾರೆ.
ಇದು ಟೀಮ್ ಇಂಡಿಯಾದ ತೆರೆಯ ಹಿಂದಿನ ಕಥೆ.. ಆದ್ರೆ ಮೆಂಟರ್ ಧೋನಿ ಮತ್ತು ಹೆಡ್ ಕೋಚ್ ರವಿಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ನಲ್ಲಿ ಉತ್ತಮ ಪ್ರದರ್ಶನ ನೀಡಲಿ. ಟೀಮ್ ಇಂಡಿಯಾ ಕಪ್ ಗೆಲ್ಲಲಿ ಅನ್ನೋದು ಕೋಟಿ ಕೋಟಿ ಅಭಿಮಾನಿಗಳ ಹಾರೈಕೆಯಾಗಿದೆ. ಆಲ್ ದಿ ಬೆಸ್ಟ್ ಟೀಮ್ ಇಂಡಿಯಾ…!