40 ಮೂಲ ಅಂಕಗಳಷ್ಟು ರೆಪೋದರ ಏರಿಸಿದ RBI
ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋದರವನ್ನು 40 ಮೂಲ ಅಂಕಗಳಷ್ಟು ಹೆಚ್ಚಿಸದೆ.
ದೇಶದಲ್ಲಿ ಸರಕುಗಳು ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿನ ಕೊರತೆಗಳು ದಿನೇ ದಿನೇ ಹೆಚ್ಚಾಗುತ್ತಿದ್ದು ಇವುಗಳನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು RBI ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಬುಧವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಆರ್ಥಿಕ ಸ್ಥಿರತೆ ಸಾಧಿಸಬೇಕಾದರೆ ಬೆಲೆಗಳಲ್ಲಿ ಸ್ಥಿರತೆ ಸಾಧಿಸಬೇಕಾಗುತ್ತದೆ. ಈ ಅಂಶವನ್ನು ಗಮನದಲ್ಲಿರಿಸಿಕೊಂಡು ವಿತ್ತೀಯ ನೀತಿ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.
ಏನಿದು ರೆಪೊ ದರ? ರೆಪೋ ದರವು ಭಾರತದ ಇತರ ಬ್ಯಾಂಕುಗಳು, ರಿಜರ್ವ ಬ್ಯಾಂಕಿನಿಂದ ಪಡೆವ ಸಾಲದ ಬಡ್ಡಿದರವಾಗಿದ್ದು ಹಣದ ಹರಿವನ್ನು ನಿಭಾಯಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಈ ಬಡ್ಡಿದರವನ್ನು ಏರಿಕೆ ಅಥವಾ ಇಳಿಕೆ ಮಾಡುವ ಮೂಲಕ RBI ಭಾರತದ ಹಣದ ಹರಿವನ್ನು ನಿಯಂತ್ರಣ ಮಾಡುತ್ತದೆ.
ಇನ್ನೂ ರೆಪೋ ದರವನ್ನು ಇಳಿಕೆ ಮಾಡುವುದರಿಂದ ದೇಶದಲ್ಲಿ ಹಣದ ಹರಿವು ಏರಿಕೆಯಾಗುತ್ತದೆ ಹಾಗೂ ರೆಪೋ ದರವನ್ನು ಏರಿಕೆ ಮಾಡುವುದರಿಂದ ಹಣದ ಹರಿವು ಇಳಿಕೆಯಾಗುತ್ತದೆ. ಆರ್ಥಿಕತೆಯಲ್ಲಿ ಹಣದುಬ್ಬರವನ್ನು ನಿಯಂತ್ರಿಸುವ ಸಲುವಾಗಿ ರೆಪೋದರವನ್ನು ಏರಿಕೆ ಮಾಡುವುದರಿಂದ ಹಣದ ಹರಿವು ಇಳಿಕೆಯಾಗುತ್ತದೆ. ಪ್ರಸ್ತುತ ಭಾರತದ ಆರ್ಥಿಕತೆಯಲ್ಲಿ ಹೆಚ್ಚಿದ ಹಣದುಬ್ಬರವನ್ನು ಕಡಿಮೆ ಮಾಡಲು ಹಣದ ಹರಿವನ್ನು ನಿಯಂತ್ರಿಸಬೇಕಾಗುತ್ತದೆ.
ಏನಿದರ ಪರಿಣಾಮ?ರೆಪೋ ದರವನ್ನು ಹೆಚ್ಚಿಸುವುದರಿಂದ ಬ್ಯಾಂಕುಗಳೂ ಕೂಡ ತಮ್ಮ ಸಾಲದ ಬಡ್ಡಿದರವನ್ನು ಹೆಚ್ಚಿಸುತ್ತವೆ.
ಈಗ ದೇಶ ಮತ್ತು ಜಗತ್ತು ಹಣದುಬ್ಬರ ಎದುರಿಸುತ್ತಿದೆ ಎಂಬುದು ಗೊತ್ತಿರುವ ಅಂಶವೇ. ಹೀಗಿರುವಾಗ ಹಣ ಹರಿದಾಡುತ್ತಲೇ ಇದ್ದರೆ ಅದಾಗಲೇ ಬೇಡಿಕೆಯಲ್ಲಿರುವ ಹಾಗೂ ಕೊರತೆ ಇರುವ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುವುದಕ್ಕೆ ಜನ ಇನ್ನಷ್ಟು ಹಣ ಸುರಿಯತೊಡಗುತ್ತಾರೆ. ಆದರೆ ಮಾರುಕಟ್ಟೆಗೆ ಹಣ ಖರ್ಚು ಮಾಡುವುದಕ್ಕೆ ನಗದಿನ ಹರಿವು ಯಾವಾಗ ಕಡಿಮೆಯಾಗುತ್ತದೋ, ಸರಳ ಮಾತಲ್ಲಿ ಹೇಳುವುದಾದರೆ ಸುಲುಭಕ್ಕೆ ಸಾಲ ಹುಟ್ಟದ ಸ್ಥಿತಿ ಇದ್ದಾಗ ಇದಕ್ಕೆ ನಿಯಂತ್ರಣ ಬೀಳುತ್ತದೆ.
ಇದರಿಂದ ಜನರು ಖರ್ಚು ಮಾಡುವ ಪ್ರಮಾಣವು ಕಡಿಮೆಯಾಗುತ್ತದೆ. ಖರ್ಚು ಮಾಡುವುದರ ಬದಲಾಗಿ ಜನರು ತಮ್ಮ ಹಣವನ್ನು ಕೂಡಿಡಲು ಬಯಸುತ್ತಾರೆ. ಜನರ ಖರೀದಿಯ ಸಾಮರ್ಥ್ಯ ಕಡಿಮೆಯಾಗುತ್ತದೆ. ಇದು ಬೇಡಿಕೆ ಮತ್ತು ಪೂರೈಕೆಯ ಸರಪಳಿಯ ಮೇಲೆ ಪರಿಣಾಮ ಬೀರುತ್ತದೆ ಅಂತಿಮವಾಗಿ ಹಣದುಬ್ಬರವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ.