RCB | ಫ್ಯಾನ್ಸ್ ಬಗ್ಗೆ ಮಾತನಾಡುತ್ತಾ ಫಾಫ್ ಭಾವುಕ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದೊಂದು ಉತ್ತಮ ಸೀಸನ್.
ನನ್ನ ನಾಯಕತ್ವದ ಮೊದಲ ಸೀಸನ್ ನಲ್ಲಿಯೇ ಇಲ್ಲಿಯವರೆಗೂ ತಂಡವನ್ನು ಕರೆತಂದಿದ್ದು, ತುಂಬಾ ಖುಷಿ ಕೊಟ್ಟಿದೆ.
ನಾವು ಎಲ್ಲಿ ಹೋದರೂ ನಮ್ಮ ಅಭಿಮಾನಿಗಳು ನಮ್ಮ ಹಿಂದೆಯೇ ಇದ್ದಾರೆ.
ನಮ್ಮನ್ನ ಬೆಂಬಲಿಸಲು ಇಲ್ಲಿಯವರೆಗೂ ಬಂದಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲಸಿಸ್ ಹೇಳಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸತತ ಮೂರನೇ ಬಾರಿಗೆ ಪ್ಲೇ ಆಫ್ಸ್ ಪ್ರವೇಶಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಲಕ್ನೋ ಸೂಪರ್ ಜೈಂಟ್ ವಿರುದ್ಧ ಗೆದ್ದು, ಕ್ವಾಲಿಫೈಯರ್ ಪ್ರವೇಶಿಸಿತ್ತು.
ಆದ್ರೆ ಫೈನಲ್ ತಲುಪಲು ಪಕ್ಕಾ ಗೆಲ್ಲಬೇಕಿದ್ದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಬೆಂಗಳೂರು ತಂಡ ಸೋಲು ಕಂಡಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟರ್ ಜೋಸ್ ಬಟ್ಲರ್ ಅಬ್ಬರಿಸಿದ ಕಾರಣ ಆರ್ ಸಿಬಿ ಏಳು ವಿಕೆಟ್ ಗಳಿಂದ ಸೋಲನುಭಸಬೇಕಾಯಿತು.
ಪರಿಣಾಮ ಬೆಂಗಳೂರು ತಂಡದ ಮೂರನೇ ಸ್ಥಾನದಲ್ಲಿ ಟೂರ್ನಿಯನ್ನ ಮುಗಿಸಿದ್ರೆ, ರಾಜಸ್ಥಾನ್ ರಾಯಲ್ಸ್ ತಂಡ ಫೈನಲ್ ಪ್ರವೇಶಿಸಿದೆ, ಅಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಯಲ್ಸ್ ಸೆಣಸಾಡಲಿದ್ದಾರೆ.
ಈ ಹಿನ್ನೆಲೆಯಲ್ಲಿ ಪಂದ್ಯದ ಬಳಿಕ ಮಾನತಾಡಿದ ಫಾಫ್ ಡುಪ್ಲಸಿಸ್, ನಿರ್ಣಾಯಕ ಕದನದಲ್ಲಿ ಸೋಲು ಅನುಭವಿಸಿದ್ದು, ನಿರಾಸೆ ತಂದಿದೆ.
ಆದರೂ ಈ ಸೀಸನ್ ನಮಗೆ ಅದ್ಭುತವಾಗಿತ್ತು. ಅದೇ ರೀತಿ ಭಾರತೀಯ ಸಂಸ್ಕೃತಿ ಶ್ರೇಷ್ಠವಾಗಿದ್ದು, ಇಲ್ಲಿನ ಜನರು ತುಂಬಾ ಪ್ರೀತಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ.
ವಿಶೇಷವಾಗಿ ಹರ್ಷಲ್ ಅದ್ಭುತವಾಗಿ ಆಡಿದ್ದಾರೆ. ಇನ್ನು ಡಿಕೆಶಿ ಬಗ್ಗೆ ಹೇಳಲು ಏನೂ ಇಲ್ಲ. ಮತ್ತೆ ರಾಷ್ಟ್ರೀಯ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ.
ರಜತ್ ಪಟಿದಾರ್ ಕೂಡ ಎಲ್ಲರ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ. ಇಂದಿನ ಪಂದ್ಯ ನಮ್ಮನ್ನು ತೀವ್ರ ಹತಾಶೆಗೆ ದೂಡಿದೆ.
ರಾಜಸ್ಥಾನ್ ರಾಯಲ್ಸ್ ಬಲಿಷ್ಠ ತಂಡ. ವಾಸ್ತವವಾಗಿ ನಮಗಿಂತ ಅವರೇ ಗೆಲುವಿಗೆ ಅರ್ಹರು ಎಂದು ಫಾಫ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ನಮ್ಮ ಮೊದಲ ಆರು ಓವರ್‌ಗಳು ಟೆಸ್ಟ್ ಕ್ರಿಕೆಟ್‌ನಂತೆ ಸಾಗಿದವು. ಈ ವಿಕೆಟ್ ಹಳೆಯದಾದಂತೆ ಬ್ಯಾಟ್ಸ್‌ಮನ್‌ಗಳಿಗೆ ಸಹಾಯವಾಗುತ್ತಿತ್ತು ಎಂದು ಫಾಫ್ ತಿಳಿಸಿದ್ದಾರೆ.
ಇದೇ ವೇಳೆ ಆರ್ ಸಿಬಿ ಅಭಿಮಾನಿಗಳ ಬಗ್ಗೆ ಮಾತನಾಡಿದ ಫಾಫ್, ನಮ್ಮ ಅಭಿಮಾನಿಗಳ ಬಗ್ಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ.
ಅವರು ಎಲ್ಲೇ ಇದ್ದರೂ ಆರ್ ಸಿಬಿ ನಾಮಸ್ಮರಣೆ ಮಾಡುತ್ತಾ, ಆ ಪ್ರದೇಶವನ್ನು ಆವರಿಸಿಕೊಳ್ಳುತ್ತಾರೆ.
ವ್ಯಕ್ತಿಗತವಾಗಿ, ತಂಡದ ಪರವಾಗಿ ಇಷ್ಟು ದೊಡ್ಡ ಅಭಿಮಾನಿ ಬಳಗವನ್ನು ಪಡೆದಿರೋದು ಹೆಮ್ಮೆ ಅನಿಸುತ್ತಿದೆ ಎಂದು ಫಾಫ್ ಭಾವುಕರಾಗಿದ್ದಾರೆ. ಅಲ್ಲದೇ ಪ್ರತಿ ಒಬ್ಬರಿಗೂ ಡುಪ್ಲಸಿಸ್ ಧನ್ಯವಾದಗಳನ್ನು ತಿಳಿಸಿದ್ದಾರೆ.