ಆರ್ ಸಿಬಿಗೆ #HHH ಶ್ರೀರಕ್ಷೆ…!!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲುವ ಭರವಸೆ ಮೂಡಿಸಿದೆ.
ಲೀಗ್ ಹಂತದಲ್ಲಿ 14 ಪಂದ್ಯಗಳನ್ನಾಡಿದ ಆರ್ ಸಿಬಿ ಎಂಟು ಪಂದ್ಯಗಳಲ್ಲಿ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದೊಂದಿಗೆ ಅಂತಿಮ ನಾಲ್ಕರ ಘಟ್ಟ ತಲುಪಿತ್ತು.
ಬುಧವಾರ ನಡೆದ ಎಲಿಮಿನೇಟರ್ ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ ಸಿಬಿ ಗೆದ್ದು ಕ್ವಾಲಿಫೇಯರ್ ಗೆ ಸಜ್ಜಾಗಿದೆ.
ಆರ್ ಸಿಬಿ ಚೊಚ್ಚಲ ಟೈಟಲ್ ಗೆಲುವಿಗೆ ಇನ್ನೆರಡು ಹೆಜ್ಜೆಗಳು ಮಾತ್ರ ಬಾಕಿ ಉಳಿದಿವೆ.
ಬೆಂಗಳೂರು ತಂಡ ಮುಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲಿದೆ.
ಈ ಪಂದ್ಯದಲ್ಲಿ ಗೆಲುವು ದಾಖಲಿಸಿದ್ರೆ ಆರ್ ಸಿಬಿ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಈ ನಡುವೆ ಆರ್ ಸಿಬಿಯಲ್ಲಿ ತ್ರಿಬಲ್ ಹೆಚ್, ಹವಾ ಜೋರಾಗಿದೆ.
ನಮಗೆಲ್ಲರಿಗೂ ಗೊತ್ತಿರುವಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಕೆಜಿಎಫ್ ತಾಕತ್ತು ಇದ್ದೇ ಇದೆ.
ಆದ್ರೆ ಈ ಆವೃತ್ತಿಯಲ್ಲಿ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಫಾಫ್ ಬಿಗ್ ಇನ್ನಿಂಗ್ಸ್ ಆಡುವಲ್ಲಿ ಪದೇ ಪದೇ ವಿಫಲರಾಗುತ್ತಿದ್ದಾರೆ.
ಆದ್ರೂ ಇನ್ನುಳಿದ ಬ್ಯಾಟರ್ ಗಳ ಕೆಚ್ಚೆದೆಯ ಆಟದ ನೆರವಿನಿಂದ ಬೆಂಗಳೂರು ತಂಡ ಕ್ವಾಲಿಪೇಯರ್ ಹಂತ ತಲುಪಿದೆ.
ಇದಕ್ಕೆ ಕೇವಲ ಬ್ಯಾಟರ್ ಗಳು ಮಾತ್ರ ಕಾರಣವಲ್ಲ. ಬದಲಿಗೆ ಆರ್ ಸಿಬಿಯಲ್ಲಿರುವ ತ್ರಿಬಲ್ ಹೆಚ್ ಜೋಡಿಯೂ ಪ್ರಮುಖ ಕಾರಣವಾಗಿದೆ.
ಹೌದು..! ತ್ರಿಬಲ್ ಹೆಚ್ ಅಂದ್ರೆ ಹೆಜಲ್ ವುಡ್, ಹರ್ಷಲ್ ಪಟೇಲ್, ಹಸರಂಗ ಜೋಡಿ..!
ಈ ಮೂವರು ಬೌಲರ್ ಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಶ್ರೀರಕ್ಷೆಯಾಗಿದ್ದಾರೆ. ಆರ್ ಸಿಬಿ ಗೆದ್ದಿರುವ ಎಲ್ಲಾ ಪಂದ್ಯಗಳಲ್ಲೂ ಈ ಮೂವರು ಬೌಲರ್ ಗಳ ಪಾತ್ರ ಪ್ರಮುಖವಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆ ಎಲಿಮಿನೇಟರ್ ಪಂದ್ಯದಲ್ಲಿ ಈ ಮೂವರು ತೋರಿದ ಪ್ರದರ್ಶನ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯದಲ್ಲಿ ದೀಪಕ್ ಹೂಡಾ, ಕೆ.ಎಲ್.ರಾಹುಲ್ ಉತ್ತಮವಾಗಿ ಆಡುತ್ತಿದ್ದರು. ಇನ್ನೇನು ಪಂದ್ಯ ಲಕ್ನೋದ ಪಾಲಾಗುತ್ತದೆ ಅಂತಾ ಎಲ್ಲರೂ ಅಂದುಕೊಂಡಿದ್ದರು.
ಆದ್ರೆ 15 ನೇ ಓವರ್ ನಲ್ಲಿ ಬೌಲಿಂಗ್ ಗೆ ಬಂದ ವನಿಂದು ಹಸರಂಗ ಆರ್ ಸಿಬಿಗೆ ಬ್ರೇಕ್ ನೀಡಿದರು. ಗೇರ್ ಚೇಂಜ್ ಮಾಡಿ ಬ್ಯಾಟ್ ಮಾಡುತ್ತಿದ್ದ ದೀಪಕ್ ಹೂಡಾರನ್ನ ವನಿಂದು ಹಸರಂಗ ಕ್ಲೀನ್ ಬೋಲ್ಡ್ ಮಾಡಿದರು.

ಇದಾದ ನಂತರ 18ನೇ ಓವರ್ ಎಸೆಯಲು ಬಂದ ಹರ್ಷಲ್ ಪಟೇಲ್, ರನ್ ಗಳಿಗೆ ಕಡಿವಾಣ ಹಾಕಿದರು. ಬೌಂಡರಿ, ಸಿಕ್ಸರ್ ಗಳನ್ನು ಕೊಡಲೇ ಬಿಗಿಯಾಗಿ ಬೌಲಿಂಗ್ ಮಾಡಿದರು.
ಬಳಿಕ 19ನೇ ಓವರ್ ನಲ್ಲಿ ಹೆಜಲ್ ವುಡ್ ಕೆ.ಎಲ್.ರಾಹುಲ್ ವಿಕೆಟ್ ತೆಗೆಯುವ ಮೂಲಕ ಪಂದ್ಯಕ್ಕೆ ಟರ್ನ್ ನೀಡಿದರು. ನಂತರದ ಎಸೆತದಲ್ಲಿ ಕೃನಾಲ್ ಪಾಂಡ್ಯರನ್ನ ಪೆವಿಲಿಯನ್ ಗೆ ಕಳುಹಿಸಿದರು.
ಅಂತಿಮವಾಗಿ ಕೊನೆಯ 20ನೇ ಓವರ್ ನಲ್ಲಿ ಹರ್ಷಲ್ ಪಟೇಲ್ ಮತ್ತಷ್ಟು ಬಿಗಿಯಾಗಿ ಬೌಲಿಂಗ್ ಮಾಡಿ ಆರ್ ಸಿಬಿಗೆ ಗೆಲುವು ತಂದುಕೊಟ್ಟರು.
ಅಂದಹಾಗೆ ಹರ್ಷಲ್ ಪಟೇಲ್ ಈ ಆವೃತ್ತಿಯಲ್ಲಿ 19 ವಿಕೆಟ್ ಪಡೆದಿದ್ದಾರೆ. ವನಿಂದು ಹಸರಂಗ 25 ವಿಕೆಟ್ ಪಡೆದು ಪರ್ಪಲ್ ಕ್ಯಾಪ್ ರೇಸ್ ನಲ್ಲಿದ್ದಾರೆ.
ಹೆಜಲ್ ವುಡ್ 18 ವಿಕೆಟ್ ಪಡೆದಿದ್ದಾರೆ. ಒಟ್ಟಾರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಈ ಮೂವರು 52 ವಿಕೆಟ್ ಪಡೆದಿದ್ದಾರೆ.








