RCB | ಚರಿತ್ರೆ ಸೃಷ್ಠಿಸಿದ ರಜತ್ ಪಟಿದಾರ್…!!!
ಡು ಆರ್ ಡೈ ಪಂದ್ಯವಾಗಿದ್ದ ಎಲಿಮಿನೇಟರ್ ಮ್ಯಾಚ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ಈಡರ್ನ್ಸ್ ಗಾಡರ್ನ್ಸ್ ನಲ್ಲಿ ನಡೆದ 15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು.
ಕೊನೆ ಓವರ್ ವರೆಗೂ ರಣ ರೋಚಕವಾಗಿದ್ದ ಪಂದ್ಯದಲ್ಲಿ ಅಂತಿಮವಾಗಿ ಆರ್ ಸಿಬಿ ತಂಡ 14 ರನ್ ಗಳಿಂದ ಗೆಲುವಿನ ಕೇಕೆ ಹಾಕಿತು. ಇದರೊಂದಿಗೆ ಕೆ.ಎಲ್ ರಾಹುಲ್ ನಾಯಕತ್ವ ಲಕ್ನೋ ಸೂಪರ್ ಜೈಂಟ್ಸ್ ತಂಡ ಟೂರ್ನಿಯಿಂದ ಎಲಿಮಿನೇಟ್ ಆದ್ರೆ ಫಾಫ್ ನಾಯಕತ್ವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎರಡನೇ ಎಲಿಮಿನೇಟರ್ ಪಂದ್ಯಕ್ಕೆ ಲಗ್ಗೆ ಇಟ್ಟಿದೆ.
ಅಂದಹಾಗೆ ಈ ನಾಕೌಟ್ ಪಂದ್ಯದಲ್ಲಿ ಆರ್ ಸಿಬಿಯ ಯುವ ಬ್ಯಾಟರ್ ರಜತ್ ಪಟಿದಾರ್ ರಫ್ ಆಡಿದ್ರು. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಚೊಚ್ಚಲ ಶತಕ ಸಿಡಿಸಿ ಸಂಭ್ರಮಿಸಿದರು. ಒಂದು ಕಡೆ ವಿಕೆಟ್ ಗಳು ಬೀಳುತ್ತಿದ್ದರೂ ಕ್ರೀಸ್ ಗೆ ಕಚ್ಚಿನಿಂತ ರಜತ್ ಪಟಿದಾರ್, 12 ಬೌಂಡರಿ, 7 ಸಿಕ್ಸರ್ ಗಳ ನೆರವಿನಿಂದ 112 ರನ್ ಗಳಿಸಿದರು. ಆ ಮೂಲಕ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

ರಜತ್ ಪಟಿದಾರ್ ಸೆಂಚೂರಿಯಿಂದ ಸೃಷ್ಠಿಯಾದ ದಾಖಲೆಗಳು ಹೀಗಿವೆ.
ರಜತ್ ಪಾಟಿದಾರ್ ಆರ್‌ಸಿಬಿ ಪರ ನಾಕೌಟ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ.
ರಜತ್ ಪಾಟಿದಾರ್ (54 ಎಸೆತಗಳಲ್ಲಿ 112, 12 ಬೌಂಡರಿ, 7 ಸಿಕ್ಸರ್) ಪ್ಲೇಆಫ್ ಪಂದ್ಯದಲ್ಲಿ ಆರ್‌ಸಿಬಿ ಪರ ಗರಿಷ್ಠ ರನ್ ಗಳಿಸಿದ ಮೊದಲ ಆಟಗಾರ ಎನಿಸಿಕೊಂಡರು. ಆ ಮೂಲಕ ಕ್ರಿಸ್ ಗೇಲ್ ಅವರ 89 ರನ್ ಗಳ ದಾಖಲೆಯನ್ನು ಮುರಿದರು.
ಅಲ್ಲದೇ ರಜತ್ ಪಾಟಿದಾರ್, ಐಪಿಎಲ್‌ನಲ್ಲಿ ಅನ್‌ಕ್ಯಾಪ್ಡ್ ಆಟಗಾರನಾಗಿ ಶತಕ ಬಾರಿಸಿದ ನಾಲ್ಕನೇ ಆಟಗಾರರಾದರು. ಈ ಹಿಂದೆ 2009ರಲ್ಲಿ ಆರ್ ಸಿಬಿ ಪರ ಮನೀಷ್ ಪಾಂಡೆ ಡೆಕ್ಕನ್ ಚಾರ್ಜಸ್ ವಿರುದ್ಧ 114 ರನ್ ಗಳಿಸಿದ್ದರು. 2011ರಲ್ಲಿ ಪಂಜಾಬ್ ಕಿಂಗ್ಸ್ ಪರ ಪಾಲ್ ವಾಲ್ತಾಟಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 120 ರನ್ ಗಳಿಸಿದ್ದರು. 2021ರಲ್ಲಿ ಆರ್ ಸಿಬಿ ಪರ ದೇವದತ್ ಪಡಿಕ್ಕಲ್ ರಾಜಸ್ಥಾನ್ ರಾಯಲ್ಸ್ ವಿರುದ್ಧ 101 ರನ್ ಗಳಿಸಿದ್ದರು.
ಮುಖ್ಯವಾಗಿ ಅನ್ ಕ್ಯಾಪ್ಡ್ ಪ್ಲೇಯರ್ ಆಗಿ ಪ್ಲೇಆಫ್ ಪಂದ್ಯದಲ್ಲಿ ಶತಕ ಬಾರಿಸಿದ ಮೊದಲ ಆಟಗಾರ ರಜತ್ ಪಾಟಿದಾರ್. ಅಲ್ಲದೆ ಒಟ್ಟಾರೆ ಪ್ಲೇಆಫ್ ಪಂದ್ಯದಲ್ಲಿ ಶತಕ ಬಾರಿಸಿದ ಐದನೇ ಆಟಗಾರ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಸೆಹ್ವಾಗ್, ಶೇನ್ ವ್ಯಾಟ್ಸನ್, ವೃದ್ಧಿಮಾನ ಸಹಾ ಮತ್ತು ಮುರಳಿ ವಿಜಯ್ ಈ ಸಾಧನೆ ಮಾಡಿದ್ದರು.
‘ಅನ್‌ಕ್ಯಾಪ್ಡ್’ ಆಟಗಾರನಾಗಿ ಮೂರನೇ ಅತಿ ಹೆಚ್ಚು ಸ್ಕೋರ್ ಗಳಿಸಿದ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ಕೆಕೆಆರ್ ಪರ ಮನೀಷ್ ಪಾಂಡೆ 2014ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 94 ರನ್ ಗಳಿಸಿದ್ದರು. 2012ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮನ್ವಿಂದರ್ ಬಿಸ್ಲಾ 89 ರನ್ ಗಳಿಸಿದ್ದರು. rajat patidar record breaking innings








