RCBಯ “ಪುಷ್ಪರಾಜ್” ಪಟಿದಾರ್.. ತಗ್ಗೋದೇ ಇಲ್ಲ
ಒಂದು ಡಜನ್ ಬೌಂಡರಿಗಳು.. ಅರ್ಧ ಡಜನ್ ಗೂ ಹೆಚ್ಚು ಸಿಕ್ಸರ್ ಗಳು.. 49 ಎಸೆತಗಳಲ್ಲಿ ಭರ್ಜರಿ ಶತಕ.. 54 ಎಸೆತಗಳಲ್ಲಿ 112 ರನ್.. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಬ್ಯಾಟರ್ ರಜತ್ ಪಟಿದಾರ್ ವಿಧ್ವಂಸಕ ಬ್ಯಾಟಿಂಗ್..
ಹೌದು..!! ಕೊಲ್ಕತ್ತಾದ ಈಡರ್ನ್ ಗಾರ್ಡನ್ ಮೈದಾನದಲ್ಲಿ ಆರ್ ಸಿಬಿಯ ಸಿಡಿಲಮರಿ ಘರ್ಜಿಸಿದೆ. ಕಳೆದ ಕೆಲವು ಪಂದ್ಯಗಳಿಂದ ಕೇವಲ ಟ್ರೈಲರ್ ತೋರಿಸುತ್ತಿದ್ದ ಪಟಿದಾರ್ ಬುಧವಾರ ಫುಲ್ ಪಿಚ್ಚರ್ ತೋರಿದ್ದಾರೆ.
ಸಾಮಾನ್ಯವಾಗಿ ಆರ್ ಸಿಬಿ ಪಂದ್ಯ ಅಂದ್ರೆ ಎಲ್ಲರೂ ಕೆಜಿಎಫ್ ಅಬ್ಬರವನ್ನ ನಿರೀಕ್ಷೆ ಮಾಡುತ್ತಾರೆ. ಅಂದರೇ ಕೊಹ್ಲಿ, ಗ್ಲೆನ್ ಮ್ಯಾಕ್ಸ್ ವೆಲ್, ಫಾಫ್ ಡುಪ್ಲಸಸ್ ದರ್ಬಾರ್ ನಡೆಯುತ್ತೆ ಅಂತಾ ಅಂದಾಜಿಸುತ್ತಾರೆ.
ಎದುರಾಳಿ ತಂಡಗಳು ಕೂಡ ಕೇವಲ ಕೆಜಿಎಫ್ ಆಟಗಾರರ ಬಗ್ಗೆ ಮಾತ್ರ ತಲೆಕಡಿಸಿಕೊಂಡು ರಣತಂತ್ರಗಳನ್ನು ರೂಪಿಸಿಕೊಂಡಿರುತ್ತದೆ.
ಆದ್ರೆ ಎಲಿಮಿನೇಟರ್ ಪಂದ್ಯದಲ್ಲಿ ಸೀನ್ ರಿವರ್ಸ್ ಆಗಿದೆ. ಯಾರೂ ಊಹಿಸದ ರೀತಿಯಲ್ಲಿ ಮಧ್ಯಪ್ರವೇಶದ ಯುವ ಬ್ಯಾಟರ್ ರಜತ್ ಪಟಿದಾರ್ ಸುನಾಮಿ ಇನ್ನಿಂಗ್ಸ್ ಆಡಿದ್ದಾರೆ.
ರಜತ್ ಆಟ ಒಂದು ರೀತಿ ಸಿಂಗಲ್ ಶೇರ್ ಆಟದಂತೆ ಕಾಣುತ್ತಿತ್ತು. ಅಂದ್ರೆ ಪುಷ್ಪ ಸಿನಿಮಾದಲ್ಲಿನ ರಗಡ್ ಆಟಿಟ್ಯೂಡ್ ನಲ್ಲಿ ರಜತ್ ಘರ್ಜಿಸಿದ್ದಾರೆ.
ರಜತ್ ಪಟಿದಾರ್ ಯಾರಿಗೇನೂ ಕಮ್ಮಿಯಲ್ಲ.. ನಾನು ತಗ್ಗೋದೇ ಇಲ್ಲ ಎಂಬಂತೆ ಈಡರ್ನ್ ಗಾರ್ಡನ್ ನಲ್ಲಿ ಬೌಂಡರಿ, ಸಿಕ್ಸರ್ ಗಳ ಸುರಿಮಳೆ ಗೈದರು.

ಲಕ್ನೋ ಬೌಲರ್ ಗಳ ಮೇಲೆ ಕೊಂಚವೂ ಕರುಣೆ ತೋರದ ರಜತ್ ಪಟಿದಾರ್, ಮೈದಾನದ ಅಷ್ಟ ದಿಕ್ಕುಗಳಿಗೆ ಚೆಂಡನ್ನ ಪರಿಚಯಿಸಿದರು.
ಸ್ಪಿನ್ನರ್ ಇರಲಿ.. ವೇಗದ ಬೌಲರ್ ಬರಲಿ.. ದಡಂ ದಶಗುಣಂ ಎಂಬಂತೆ ಎಲ್ಲರನ್ನೂ ಸಮಾಂತರವಾಗಿ ದಂಡಿಸಿದರು. ಅದರಲ್ಲೂ ಆರ್ ಸಿಬಿಯ ಸುಲ್ತಾನ ದಿನೇಶ್ ಕಾರ್ತಿಕ್ ಜೊತೆ ಸೇರಿದ ಪಟಿದಾರ್ ದೆತ್ ಓವರ್ ಗಳಲ್ಲಿ ಹೆಬ್ಬುಲಿಯಂತೆ ಲಕ್ನೋ ಬೌಲರ್ ಗಳನ್ನು ಬೇಟೆಯಾಡಿದರು.
ಮುಖ್ಯವಾಗಿ ಮೊದಲ ಓವರ್ ನಲ್ಲಿ ಕ್ರೀಸ್ ಗೆ ಬಂದು ಅಂತಿಮ ಎಸೆತದವರೆಗೂ ಕ್ರೀಸ್ ನಲ್ಲಿ ನಿಂತು ಇನ್ನಿಂಗ್ಸ್ ಕಟ್ಟಿದ ಪಟಿದಾರ್ ಆಟಕ್ಕೆ ದಿಗ್ಗಜ ಕ್ರಿಕೆಟಿಗರು ಸಲಾಂ ಎನ್ನುತ್ತಿದ್ದಾರೆ.
ಅಂದಹಾಗೆ ಮಧ್ಯಪ್ರದೇಶದ 28 ವರ್ಷದ ಪಟಿದಾರ್ 2020 ಮತ್ತು 2021ರಲ್ಲಿ ಆರ್ ಸಿಬಿ ಪರ ಆಡಿದ್ದರು. ಆದ್ರೆ ಆಗ ಪಟಿದಾರ್ ಹೆಚ್ಚು ಸದ್ದು ಮಾಡಲೇ ಇಲ್ಲ. ಹೀಗಾಗಿ ಅವರು ಬೆಂಚ್ ಗೆ ಸೀಮಿತವಾಗಿದ್ದರು.
ಇನ್ನು 2022 ಮೆಗಾ ಹರಾಜಿನಲ್ಲಿ ರಜತ್ ಅನ್ ಸೋಲ್ಡ್ ಆದರು. ಆದ್ರೆ ಟೂರ್ನಿಯ ಮೊದಲ ವಾರದಲ್ಲಿ ಆರ್ ಸಿಬಿ ಆಟಗಾರ ಲುವ್ನಿತ್ ಸಿಸೋಡಿಯಾ ಇಂಜೂರಿ ಆದರು. ಹೀಗಾಗಿ ಅವರ ಸ್ಥಾನಕ್ಕೆ ರಜತ್ ಅವರನ್ನ ಆರ್ ಸಿಬಿ ಫ್ರಾಂಚೈಸಿ ಕರೆಸಿಕೊಳ್ತು.
ಆರಂಭದಲ್ಲಿ ಬೆಂಚ್ ಗೆ ಸೀಮಿತವಾಗಿದ್ದ ರಜತ್ ನಂತರ ಪಂದ್ಯದಿಂದ ಪಂದ್ಯಕ್ಕೆ ಶೈನ್ ಆದರು. ಇದೀಗ ಎಲಿಮಿನೇಟರ್ ನಂತಹ ಪಂದ್ಯದಲ್ಲಿ ಶತಕ ಸಿಡಿಸಿ ತಮ್ಮ ಸಾಮರ್ಥ್ಯ ಸಾಭೀತುಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆರ್ ಸಿಬಿಯ ವಿರಾಟ್ ಕೊಹ್ಲಿ, ಫಾಫ್ ಡುಪ್ಲಸಿಸ್, ದಿನೇಶ್ ಕಾರ್ತಿಕ್ ಸೇರಿದಂತೆ ಹಲವು ಕ್ರಿಕೆಟಿಗರು ಪಟಿದಾರ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.RCB who-rajat-patidar IPL 2022








