BJP ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿ ಪ್ರಮುಖ ನಾಯಕರ ಪ್ರತಿಕ್ರಿಯೆಗಳು…
ಬಿಜೆಪಿ ಯುವಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಣಿ ಸದಸ್ಯ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ನಾಯಕರು ಪ್ರತಿಕ್ರಿಸಿದ್ದು ಘಟನೆಯನ್ನ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅರಗ ಜ್ಞಾನೇಂದ್ರ
ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಗಳು ಕೇರಳಕ್ಕೆ ಓಡಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು, ಅಲ್ಲಿನ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆ. ಹತ್ಯೆ ರಾಜಕೀಯ ಪ್ರೇರಿತವೇ ಅಥವಾ ಬೇರೆ ಕಾರಣವೇ ಎಂಬುದನ್ನು ತನಿಖೆಯಿಂದ ಬಹಿರಂಗವಾಗಲಿದೆ ಎಂದು ಕರ್ನಾಟಕ ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ
ಈ ಘಟನೆ ಕೇರಳ ಗಡಿಯ ಸಮೀಪ ನಡೆದಿರುವುದರಿಂದ ನಮ್ಮ ಪೊಲೀಸರು ಕೇರಳ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ. ಕರ್ನಾಟಕ ಡಿಜಿಪಿ ಅವರು ಕೇರಳ ಸಹೋದ್ಯೋಗಿಯೊಂದಿಗೆ ಮಾತನಾಡಲಿದ್ದು, ಮಂಗಳೂರು ಎಸ್ಪಿ ಕಾಸರಗೋಡು ಎಸ್ಪಿ ಅವರೊಂದಿಗೆ ಮಾತನಾಡಿದ್ದಾರೆ. ಇದು ಪೂರ್ವ ಯೋಜಿತ ಘಟನೆಯಂತೆ ಇತರ ಪ್ರಕರಣಗಳಿಗೆ ಹೋಲಿಕೆಯಾಗಿದೆ ಎಂದು ಕರ್ನಾಟಕ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಪ್ರಲ್ಹಾದ್ ಜೋಶಿ
ಆರಂಭಿಕ ವರದಿಗಳು ಮತ್ತು ಕೆಲವು ಮಾಧ್ಯಮ ವರದಿಗಳು SDPI &PFI ಲಿಂಕ್ಗಳಲ್ಲಿ ಸೂಚಿಸುತ್ತವೆ. ಕೇರಳದಲ್ಲಿ ಅವರಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಅವರನ್ನು ಪ್ರೋತ್ಸಾಹಿಸುತ್ತಿದೆ. ಬಿಜೆಪಿ ಯುವಮೋರ್ಚಾ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಕರ್ನಾಟಕ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಿದೆ: ಕೇಂದ್ರ ಸಚಿವ ಹಾಗೂ ಬಿಜೆಪಿ ಮುಖಂಡ ಪ್ರಲ್ಹಾದ್ ಜೋಶಿ ದೆಹಲಿಯಲ್ಲಿ ಹೇಳಿದ್ದಾರೆ.
ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್
ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಮಾತನಾಡಿದ್ದು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ನೆಲೆಸಬೇಕಾದರೆ, ಮುಲ್ಲಾ, ಮೌಲ್ವಿ ಎಸ್ ಡಿಪಿಐ ಪಿಎಫ್ಐ ನ್ನು ಹದ್ದುಬಸ್ತಿನಲ್ಲಿಡಿ ಇಲ್ಲವಾದಲ್ಲಿ ಹಿಂದೂ ಸಮಾಜ ತಿರುಗಿ ಬೀಳುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ವಾರದ ಹಿಂದೆಯೇ ಪ್ರವೀಣ್ ನೆಟ್ಟಾರ್ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎನ್ನಲಾಗುತ್ತಿದೆ. ಇಂತಹ ಕ್ರೌರ್ಯವನ್ನು ಹದ್ದುಬಸ್ತಿನಲ್ಲಿಡಬೇಕಾದರೆ, ಹಂತಕರನ್ನು ಒಂದೋ ಎನ್ ಕೌಂಟರ್ ಮಾಡಿ, ಇಲ್ಲವಾದಲ್ಲಿ ನ್ಯಾಯಾಂಗದ ಮೂಲಕ ತ್ವರಿತವಾಗಿ ನ್ಯಾಯ ಕೊಡಿಸಿ ಶಿಕ್ಷೆ ವಿಧಿಸಿ ಎಂದು ಆಗ್ರಹಿಸಿದ್ದಾರೆ.
ಶೋಭಾ ಕರಂದ್ಲಾಜೆ
ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಹಿಂದೂ ಮತ್ತು ಬಿಜೆಪಿ ಕಾರ್ಯಕರ್ತರನ್ನು ಹೆದರಿಸುವ ಉದ್ದೇಶವಾಗಿದೆ. ಇದರ ಹಿಂದೆ ದೊಡ್ಡ ಷಡ್ಯಂತ್ರ ಇದೆ. ಈ ಬಗ್ಗೆ ತನಿಖೆ ಆಗಬೇಕು, ಉಗ್ರ ಶಿಕ್ಷೆಯಾಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿರುವ ಬಜರಂಗದಳದ ನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಖಂಡನೀಯ. ಪೊಲೀಸರು ತಕ್ಷಣ ಕೊಲೆಗಡುಕರನ್ನು ಬಂಧಿಸಿ ಊಹಾಪೋಹಗಳಿಂದ ಶಾಂತಿ-ಸುವ್ಯವಸ್ಥೆ ಕದಡುವುದನ್ನು ತಪ್ಪಿಸಬೇಕು. ಕೊಲೆಗಡುಕರ ಪಕ್ಷ,ಜಾತಿ, ಧರ್ಮವನ್ನು ಲೆಕ್ಕಿಸದೆ ಪೊಲೀಸರು ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕು ಎಂದು ಟ್ವೀಟ್ ಮಾಡಿ ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.








