ರಾಜ್ಯ ರಾಜಕಾರಣದಲ್ಲಿ ಮತ್ತೆ ಅಧಿಕಾರ ಹಂಚಿಕೆ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದೆ. ದಾವಣಗೆರೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ್ ವಿ. ಶಿವಗಂಗಾ, ಡಿಸಿಎಂ ಡಿಕೆ ಶಿವಕುಮಾರ್ (ಡಿಕೆಶಿ) ಅವರನ್ನು ಬೆಂಬಲಿಸುವ ಕುರಿತು ವಿವಾದಾತ್ಮಕ ಹಾಗೂ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಎರಡೂವರೆ ವರ್ಷ ಅಧಿಕಾರ ಹಂಚಿಕೆಗೆ ಈಗಾಗಲೇ ಒಪ್ಪಂದ ಆಗಿದೆ. ಇದು ನನಗೆ ಲಭಿಸಿರುವ ಖಚಿತ ಮಾಹಿತಿ ಎಂದು ಶಾಸಕ ಶಿವಗಂಗಾ ಹೇಳಿದ್ದಾರೆ. ಹೈಕಮಾಂಡ್ ಇದನ್ನು ಸಾರ್ವಜನಿಕವಾಗಿ ಹೇಳದೇ ಇರಬಹುದು, ಆದರೆ ಒಳಗಟ್ಟಿನ ಒಪ್ಪಂದವಾಗಿದೆ ಎಂಬ ಸುಳಿವು ನೀಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ 139 ಶಾಸಕರ ಬೆಂಬಲ ಇದೆ. ನಮ್ಮಂತ 40 ರಿಂದ 50 ಯುವ ಶಾಸಕರು ಡಿಕೆಶಿ ಏನೇ ಹೇಳಿದರೂ ಮಾಡಲು ಸಿದ್ಧರಿದ್ದೇವೆ. ಅವರು ಪ್ರಾಣ ಕೇಳಿದರೂ ಕೊಡೋಕೆ ನಾವು ಸಿದ್ಧ ಎಂದು ಅವರು ಹೇಳಿದ್ದು, ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗೆ ಕಾರಣವಾಗಿದೆ.
ಈ ಹೇಳಿಕೆಯೊಂದಿಗೆ ಮತ್ತೆ ಸಿಎಂ ಬದಲಾವಣೆ, ಅಧಿಕಾರ ಹಂಚಿಕೆ, ಪಕ್ಷದ ಒಳಗಿನ ಶಕ್ತಿ ಸಮೀಕರಣ ಕುರಿತ ಚರ್ಚೆಗಳು ಜೋರಾಗಿವೆ. ಕಾಂಗ್ರೆಸ್ ಪಕ್ಷದೊಳಗಿನ ಈ ತರಹದ ಬಹಿರಂಗ ಹೇಳಿಕೆಗಳು ಹೈಕಮಾಂಡ್ಗೆ ಅಸಮಾಧಾನ ಉಂಟುಮಾಡುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಈ ಕುರಿತು ಕಾಂಗ್ರೆಸ್ ಹೈಕಮಾಂಡ್ ಅಥವಾ ಡಿಸಿಎಂ ಡಿಕೆ ಶಿವಕುಮಾರ್ ಅವರ ಪ್ರತಿಕ್ರಿಯೆ ಇನ್ನೂ ಲಭ್ಯವಾಗಿಲ್ಲ. ಆದರೆ, ರಾಜ್ಯ ರಾಜಕಾರಣದಲ್ಲಿ ಈ ಹೇಳಿಕೆ ಹೊಸ ರಾಜಕೀಯ ಕದನಕ್ಕೆ ನಾಂದಿ ಹಾಡಿದೆ ಎನ್ನಲಾಗುತ್ತಿದೆ.








