ಟೀಮ್ ಇಂಡಿಯಾ ಆಟಗಾರರು ಜೂನ್ ಕೊನೆಯಲ್ಲಿ ತರಬೇತಿ ಶುರು ಮಾಡುವುದರ ಬಗ್ಗೆ ಬಿಸಿಸಿಐ ಸುಳಿವು ನೀಡಿದೆ. ಇದ್ರ ಬೆನ್ನಲ್ಲೇ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರು ಈಗಲೇ ಪ್ಲಾನ್ ರೆಡಿ ಮಾಡಿಕೊಂಡಿದ್ದಾರೆ. ಎರಡು ತಿಂಗಳುಗಳಿಂದ ಟೀಮ್ ಇಂಡಿಯಾ ಆಟಗಾರರು ಜೊತೆಯಾಗಿ ಅಭ್ಯಾಸ ನಡೆಸಿಲ್ಲ. ಏಕಾಏಕಿ ಅಭ್ಯಾಸ ಶುರು ಮಾಡಿದಾಗ ಗಾಯಗೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಶ್ರೀಧರ್ ಅವರು ಟೀಮ್ ಇಂಡಿಯಾ ಆಟಗಾರರಿಗೆ ನಾಲ್ಕು ಹಂತದಲ್ಲಿ ನಾಲ್ಕರಿಂದ ಆರು ವಾರಗಳ ಕಾಲ ತರಬೇತಿ ನೀಡುವುದರ ಬಗ್ಗೆ ನೀಲನಕ್ಷೆ ರೆಡಿ ಮಾಡಿಕೊಂಡಿದ್ದಾರೆ.
ಆರ್. ಶ್ರೀಧರ್ ಅವರು 2014ರಿಂದ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ನನ್ನ ಪ್ರಕಾರ ಟೀಮ್ ಇಂಡಿಯಾ ಆಟಗಾರರಿಗೆ ನಾಲ್ಕರಿಂದ ಆರು ವಾರಗಳ ತರಬೇತಿ ಶಿಬಿರ ನಡೆಸಿದ್ರೆ ಸಾಕು. ಅವರು ಮತ್ತೆ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೇಕಾಗುವಂತಹ ಫಿಟ್ನೆಸ್ ಮತ್ತು ಆಟಕ್ಕೆ ಹೊಂದಿಕೊಳ್ಳುತ್ತಾರೆ ಅನ್ನೋ ವಿಶ್ವಾಸವಿದೆ. ಬೌಲರ್ಗಳು ಕನಿಷ್ಠ ಆರು ವಾರ ಹಾಗೂ ಬ್ಯಾಟ್ಸ್ಮೆನ್ಗಳಿಗೆ ನಾಲ್ಕು ವಾರಗಳ ತರಬೇತಿ ನಡೆಸಬೇಕಾಗುತ್ತದೆ ಎಂದು ಶ್ರೀಧರ್ ಹೇಳಿದ್ದಾರೆ.
ತರಬೇತಿ ಶಿಬಿರ ಶುರುವಾದ ನಂತರ ಟೀಮ್ ಇಂಡಿಯಾ ಆಟಗಾರರಿಗೆ ಹಂತ ಹಂತವಾಗಿ ಅಭ್ಯಾಸವನ್ನು ನಡೆಸಲಾಗುತ್ತದೆ. ಒಂದೇ ಸಲ ಕಠಿಣ ಅಭ್ಯಾಸಕ್ಕೆ ಒಳಪಡಿಸುವುದಿಲ್ಲ. ಮೊದಲ ಹಂತದ ಅಷ್ಟೊಂದು ಪರಿಣಾಮಕಾರಿಯಾಗಿರುವುದಿಲ್ಲ. ಆ ನಂತರ ಸ್ವಲ್ಪ ಮಟ್ಟಿನ ಕಠಿಣ ಅಭ್ಯಾಸಗಳನ್ನು ನಡೆಸಲಾಗುತ್ತದೆ. ನಾಲ್ಕನೇ ಹಂತದಲ್ಲಿ ಮಾತ್ರ ಕಠಿಣ ಅಭ್ಯಾಸವನ್ನು ನಡೆಸಲಾಗುವುದು ಎಂದು ಅವರು ಹೇಳಿದ್ರು.
ಮೊದಲ ಹಂತದಲ್ಲಿ ವೇಗ ಬೌಲರ್ಗಳು ಕೇವಲ ಎರಡು ಓವರ್ಗಳನ್ನು ಬೌಲಿಂಗ್ ಮಾಡುತ್ತಾರೆ. ಅದು ಕೂಡ ಅರ್ಧ ರನ್ ಅಪ್ ಮಾಡಿಕೊಂಡು ಬೌಲಿಂಗ್ ಮಾಡಬೇಕಾಗುತ್ತೆ. ಹಾಗೇ ಬ್ಯಾಟ್ಸ್ ಮೆನ್ಗಳು ಐದರಿಂದ ಆರು ನಿಮಿಷಗಳ ತಾಲೀಮು ಮಾತ್ರ ನಡೆಸಬೇಕಾಗುತ್ತೆ. ಇನ್ನು ಫೀಲ್ಡರ್ಗಳು ಹತ್ತು ಮೀಟರ್ ಅಂತರದಿಂದ ಆರು ಬಾರಿ ಚೆಂಡನ್ನು ಎಸೆಯಬೇಕು. ಇನ್ನು ಸೆಮಿ ಸಾಫ್ಟ್ ಬಾಲ್ ನಲ್ಲಿ ಕ್ಯಾಚ್ ಅಭ್ಯಾಸವನ್ನು ನಡೆಸಲಾಗುತ್ತದೆ. ಹಾಗಂತ ಪ್ರತಿದಿನ ಒಂದೇ ರೀತಿಯ ತರಬೇತಿಗಳು ಇರುವುದಿಲ್ಲ. ನಾಲ್ಕನೇ ವಾರದ ನಂತರ ಹಾರ್ಡ್ ಬೌಲ್ನಲ್ಲಿ ಎಂದಿನಂತೆ ಕಠಿಣ ಅಭ್ಯಾಸವನ್ನು ನಡೆಸಲಾಗುತ್ತದೆ ಎಂದು ಮೊದಲ ಹಂತದ ತರಬೇತಿಯ ಬಗ್ಗೆ ಶ್ರೀಧರ್ ಮಾಹಿತಿ ನೀಡಿದ್ದಾರೆ.
ಇನ್ನು ಆಟಗಾರರ ಸುರಕ್ಷೆತೆಯ ಬಗ್ಗೆಯೂ ಗಮನಹರಿಸಬೇಕಾಗುತ್ತದೆ. ಪ್ರತಿ ವಾರ ಆಟಗಾರರ ಫಿಟ್ನೆಸ್ ಕಾರ್ಯಗಾರವನ್ನು ಮಾಡಲಾಗುತ್ತದೆ. ಇನ್ನು ಭಾರತ ತಂಡದ ಫೀಲ್ಡಿಂಗ್ ನಲ್ಲಿ ಹೊಸತನವನ್ನು ತರುವಲ್ಲಿ ಶ್ರೀಧರ್ ಪ್ರಮುಖ ಪಾತ್ರ ವಹಿಸಿದ್ದಾರೆ. ನನ್ನಲ್ಲಿ ಕೆಲವೊಂದು ಯೋಚನೆಗಳಿವೆ. ತರಬೇತಿ ಶಿಬಿರ ಶುರುವಾಗಲಿ. ಆಗಲೇ ನನ್ನ ತಲೆಯಲ್ಲಿ ಹೊಸ ಆಲೋಚನೆಗಳು ಮೂಡುತ್ತವೆ. ಆಗ ಅದನ್ನು ಪ್ರತಿಯಬ್ಬರು ನೋಡಬಹುದು ಎಂದು ಶ್ರೀಧರ್ ಹೇಳಿದ್ರು.








