ನಿಮಗೆಲ್ಲಾ ಭಜರಂಗಿ ಭಾಯ್ ಜಾನ್ ಸಿನಿಮಾ ನೆನಪಿದೆ ಅಲ್ವಾ.. ಅದರಲ್ಲಿ ಸಲ್ಮಾನ್ ಖಾನ್ ಬಾಲಕಿಯನ್ನ ತನ್ನ ದೇಶ(ಪಾಕಿಸ್ತಾನ) ಕ್ಕೆ ಕಳುಹಿಸಲು ಭಾರತದ ಗಡಿದಾಟಿ ನಾನಾ ಕಷ್ಟಗಳನ್ನ ಅನುಭವಿಸುತ್ತಾರೆ. ಅದರಂತೆ ಮಹಾರಾಷ್ಟ್ರದಲ್ಲಿ 20 ವರ್ಷದ ಯುವಕನೊಬ್ಬ ದೇಶದ ಗಡಿದಾಟಲು ಹೋಗಿ ಬಿಎಸ್ ಎಫ್ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. ಆದ್ರೆ ಇಲ್ಲಿ ಯುವಕ ಗಡಿದಾಟಿರೋದು ತನ್ನ ಪ್ರೇಯಸಿಗಾಗಿ…!!
ಹೌದು..! ಮಹಾರಾಷ್ಟ್ರದ ಉಸ್ಮಾನಾಬಾದ್ ಮೂಲದ 20 ವರ್ಷದ ಯುವಕನಿಗೆ ಫೇಸ್ ಬುಕ್ ನಲ್ಲಿ ಪಾಕ್ ಮೂಲದ ಯುವತಿಯ ಪರಿಚಯವಾಗಿತ್ತು. ಈ ಪರಿಚಯ ಕಾಲಕಳೆದಂತೆ ಪ್ರೀತಿಯಾಗಿದೆ. ಇನ್ನೇನು ಪ್ರೇಮದ ಮತ್ತಿನಲ್ಲಿನ ಯುವಕ ತನ್ನ ಪ್ರೇಯಸಿಯನ್ನ ನೋಡಲೇಬೇಕೆಂದು ಪಾಕ್ ನತ್ತ ಹೊರಟೇ ಬಿಟ್ಟಿದ್ದಾನೆ. ಆದ್ರೆ ದಾರಿ ಮಧ್ಯೆ ಯುವಕನನ್ನು ಬಿಎಸ್ ಎಫ್ ಸಿಬ್ಬಂದಿ ಬಂಧಿಸಿದ್ದಾರೆ.
ಗೂಗಲ್ ಮ್ಯಾಪ್ ಬಳಸಿ ಉಸ್ಮಾನಾಬಾದ್ ನಿಂದ ಪಾಕಿಸ್ತಾನದ ಕರಾಚಿಯ ಷಾ ಫೈಸಲ್ ಪಟ್ಟಣದಲ್ಲಿರುವ ಪ್ರೇಯಸಿಯನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗುತ್ತಿರೋದಾಗಿ ಯುವಕ ಬಿಎಸ್ ಎಫ್ ಅಧಿಕಾರಿಗಳಿಗೆ ಹೇಳಿದ್ದಾನೆ. ಸದ್ಯ ಈತನನ್ನು ಬಿಎಸ್ ಎಫ್ ಸಿಬ್ಬಂದಿ ಪೊಲೀಸರಿಗೆ ಹಸ್ತಾಂತರಿಸಿದ್ದು, ವಿಚಾರಣೆ ಮುಂದುವರಿಯುತ್ತಿದೆ.








