ನುಡಿದಂತೆ ನಡೆಯುವ ನಮ್ಮೂರ ಜನ ನಾಯಕ ಹರೀಶ್ ಪೂಂಜಾ..!
ಇದು ರಾಜಕೀಯವಾಗಲಿ.. ಜಾತಿಯ ಮಮಕಾರವಾಗಲಿ.. ಖಂಡಿತವಾಗಿಯೂ ಅಲ್ಲ. ಒಬ್ಬ ಪತ್ರಕರ್ತನಾಗಿ, ಜನ ಸಾಮಾನ್ಯ ವ್ಯಕ್ತಿಯಾಗಿ ಬರೆಯುತ್ತಿದ್ದೇನೆ. ಇದು ನನ್ನ ಅನಿಸಿಕೆ, ಅಭಿಪ್ರಾಯವಷ್ಟೇ..
ಹರೀಶ್ ಪೂಂಜಾ.. ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಜನಪ್ರತಿನಿಧಿ. ಸುಮಾರು ಐದಾರು ವರ್ಷಗಳ ಹಿಂದೆ ಒಬ್ಬ ಸಾಮಾನ್ಯ ಬಿಜೆಪಿ ಕಾರ್ಯಕರ್ತ¨ನಾಗಿದ್ದ ಹರೀಶ್ ಪೂಂಜಾ ಇಂದು ಬೆಳ್ತಂಗಡಿ ತಾಲೂಕಿನ ಜನಪ್ರಿಯ ಶಾಸಕ.
ಜನ ಸಾಮಾನ್ಯರ ಕಷ್ಟ ಸುಖಗಳಿಗೆ ಭಾಗಿಯಾಗುವ ಮನೋಭಾವನೆ ಹರೀಶ್ ಪೂಂಜಾ ಅವರಲ್ಲಿದೆ. ಬಹುಶಃ ಇದೇ ವ್ಯಕ್ತಿತ್ವವೇ ಇಂದು ಅವರನ್ನು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದ್ದು. ಕಟ್ಟಾ ಹಿಂದೂತ್ವವಾದಿಯಾಗಿದ್ದರೂ ಜನ ನಾಯಕನಾಗಿ ಎಲ್ಲರ ಜೊತೆ ಬೆರೆಯುವ ಗುಣವನ್ನು ಹೊಂದಿದ್ದಾರೆ.
ಹರೀಶ್ ಪೂಂಜಾ ಅವರ ವ್ಯಕ್ತಿತ್ವದಲ್ಲಿ ಜಾತಿ -ಮತದ ಅಕ್ಕರೆ ಖಂಡಿತವಾಗಿಯೂ ಇಲ್ಲ. ಎಲ್ಲರೂ ಮನುಷ್ಯ ಜಾತಿ, ತನಗೆ ಎಲ್ಲಾ ಜಾತಿಯ ಬಂಧುಗಳ ಪ್ರತಿನಿಧಿ ಎಂಬುದನ್ನು ಮರೆತಿಲ್ಲ. ಜಾತಿ ರಾಜಕಾರಣ ಮಾಡಿಕೊಂಡು ಮತ ಗಿಟ್ಟಿಸುವ ಇಂದಿನ ರಾಜಕೀಯ ವ್ಯವಸ್ಥೆಯಲ್ಲಿ ಹರೀಶ್ ಪೂಂಜಾ ಅವರು ವಿಭಿನ್ನವಾಗಿ ಕಾಣುತ್ತಾರೆ.
ನಾಲ್ಕೈದು ವರ್ಷಗಳ ಹಿಂದೆ… ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಹರೀಶ್ ಪೂಂಜಾ ಅವರು ಇಂದು ಶಾಸಕರಾಗಿದ್ದಾರೆ. ಹಾಗಂತ ಸುಮ್ಮನೆ ದುಡ್ಡು ಕೊಟ್ಟು ಅವರು ಗೆದ್ದು ಬಂದಿಲ್ಲ. ಬೆಳ್ತಂಗಡಿ ಕ್ಷೇತ್ರದ ಬಗ್ಗೆ ದೂರದೃಷ್ಟಿಯನ್ನಿಟ್ಟುಕೊಂಡು ರಾಜಕಾರಣ ಮಾಡಿದ್ದವರು. ಜನರ ಸಮಸ್ಯೆಗಳನ್ನು ಅರಿತುಕೊಂಡು ಅದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ತನ್ನದೇ ಬಳಗವನ್ನು ಕಟ್ಟಿಕೊಂಡ್ರು. ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಅನ್ನೋ ಭರವಸೆ ನೀಡುತ್ತಾ ಮತ ಕೇಳಿದ್ದರು. ಯುವ ಜನತೆಯ ಪಾಲಿಗೆ ಹರೀಶ್ ಪೂಂಜಾ ಅವರು ಆಶಾಕಿರಣವಾಗಿ ಕಂಡ್ರು. ತಮ್ಮ ಕ್ಷೇತ್ರದ ಅಭಿವೃದ್ದಿಗೆ ಇಂತಹ ಜನ ನಾಯಕನೇ ಬೇಕು ಅನ್ನೋ ಭಾವನೆ ಮೂಡುವಂತೆ ಜನರಲ್ಲಿ ನಂಬಿಕೆ ಮೂಡಿಸಿದ್ದರು.
ಪರಿಣಾಮ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಯುವ ಶಾಸಕನಾಗಿ ಆಯ್ಕೆಯಾದ್ರು. ಹಾಗಂತ ಜನತೆಗೆ ನೀಡಿದ್ದ ಭರವಸೆಯನ್ನು ಅನುಷ್ಠಾನಗೊಳಿಸಲು ಕಾರ್ಯಪ್ರವೃತ್ತರಾದ್ರು. ಪ್ರವಾಹ – ನೆರೆ ಸಂದರ್ಭಗಳಲ್ಲಿ ಸ್ವತಃ ಕ್ಷೇತ್ರದಲ್ಲಿ ಓಡಾಡುತ್ತಾ ಸಮಸ್ಯೆಗೆ ಒಳಗಾದ ಜನರಿಗೆ ಪರಿಹಾರ ನೀಡುವಲ್ಲಿಯೂ ಯಶಸ್ವಿಯಾದ್ರು.
ಕೋವಿಡ್, ಲಾಕ್ ಡೌನ್ ಸಂದರ್ಭದಲ್ಲೂ ಧೈರ್ಯವಾಗಿ ಮುನ್ನುಗ್ಗಿ ಜನರಿಗೆ ಧೈರ್ಯ ತುಂಬಿದ್ರು. ಅಲ್ಲದೆ ಬಡ ಕುಟುಂಬಗಳಿಗೆ ದಿನಸಿಗಳನ್ನು ನೀಡಿದ್ದರು. ಸಮಸ್ಯೆ ಯಾವುದೇ ಇರಲಿ, ಕಾಳಜಿ ವಹಿಸಿ ಪರಿಹಾರವನ್ನು ನೀಡುತ್ತಾರೆ ಹರೀಶ್ ಪೂಂಜಾ ಅವರು.
ಕಾಳಜಿ ಕೇಂದ್ರ ಮೂಲಕ ಜನ ಸಾಮಾನ್ಯರಿಗೆ ಇನ್ನಷ್ಟು ಹತ್ತಿರವಾದ ಪೂಂಜಾ ಅವರು ಬೆಳ್ತಂಗಡಿ ಕ್ಷೇತ್ರದ ಸರ್ವೋತೋಮುಖ ಅಭಿವೃದ್ದಿಗಾಗಿ ಶ್ರಮಿಸಿದ್ರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಇನ್ನಿತರ ಮಂತ್ರಿಗಳ ನೆರವಿನಿಂದ ನೂರಾರು ಕೋಟಿ ರೂಪಾಯಿಗಳ ಅನುದಾನವನ್ನು ತಂದುಕೊಡುವಲ್ಲಿ ಪೂಂಜಾ ಅವರು ಯಶಸ್ವಿಯಾದ್ರು.
ನೆನೆಗುದಿಗೆ ಬಿದ್ದಿದ್ದ ಅನೇಕ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದ್ರು. ಜೊತೆಗೆ ಬಿಜೆಪಿ ಪಕ್ಷವನ್ನು ತಳಮಟ್ಟದಲ್ಲಿ ಬೆಳೆಯುವಂತೆ ಮಾಡಲು ಯೋಜನೆಗಳನ್ನು ಹಾಕಿಕೊಂಡ್ರು. ಇದರ ಪ್ರತಿಫಲ ಈಗ ಕಾಣುತ್ತಿದೆ.
ಹೌದು, ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ 46 ಪಂಚಾಯತ್ ಗಳಲ್ಲಿ 40 ಪಂಚಾಯತ್ ಗಳಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಹಾಗೇ 631 ಸ್ಥಾನಗಳಲ್ಲಿ ಪೈಕಿ 485 ಸ್ಥಾನಗಳನ್ನು ಗೆದ್ದುಕೊಂಡಿದೆ.
ಈ ಸಾಧನೆಯ ಹಿಂದಿನ ರೂವಾರಿ ಶಾಸಕ ಹರೀಶ್ ಪೂಂಜಾ ಎಂಬುದರಲ್ಲಿ ಎರಡು ಮಾತಿಲ್ಲ. ಅಭಿವೃದ್ದಿಯ ಜೊತೆ ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಿದ್ರೆ ದುಡ್ಡು ಹಾಕಿ ಮತ ಕೇಳುವ ಪ್ರಶ್ನೆಯೇ ಬರಲ್ಲ ಎಂಬುದಕ್ಕೆ ಇದು ಒಂದು ನಿದರ್ಶನವಷ್ಟೇ.
ಅಂದ ಹಾಗೇ ಈ ಲೇಖನವನ್ನು ಬರೆಯಲು ಕಾರಣವೂ ಇದೆ. ಹಾಗಂತ ಶಾಸಕ ಹರೀಶ್ ಪೂಂಜಾ ಅವರನ್ನು ಒಲೈಸುವ ಲೇಖನ ಹಾಗೂ ಕೆಲಸವಂತೂ ಅಲ್ಲವೇ ಅಲ್ಲ. ನಾನೂ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ರೆಖ್ಯ ಗ್ರಾಮದ ಸಾಮಾನ್ಯ ಪ್ರಜೆ. ಒಬ್ಬ ಪ್ರಜೆಯಾಗಿ, ಪತ್ರಕರ್ತನಾಗಿ ಹಾಲಿ ಶಾಸಕರ ಕಾರ್ಯ ವೈಖರಿಗಳನ್ನು ನೋಡಿಕೊಂಡು ಬಂದಿದ್ದೇನೆ. ಹಾಗೇ ಈ ಹಿಂದಿನ ಶಾಸಕರ ಕಾರ್ಯವೈಖರಿಗಳನ್ನು ನೋಡಿದ್ದೇನೆ.
ಹಾಗೇ ನೋಡಿದ್ರೆ ಈ ಹಿಂದಿನ ಶಾಸಕ ವಸಂತ ಬಂಗೇರ ತೀರಾ ಕೆಟ್ಟವರೇನೂ ಅಲ್ಲ. ಆದ್ರೆ ಹಲವು ವರ್ಷಗಳ ಜನಪ್ರತಿನಿಧಿಯಾಗಿದ್ದರೂ ಕ್ಷೇತ್ರದ ಅಭಿವೃದ್ದಿಯ ಕಡೆಗೆ ಹೆಚ್ಚಿನ ಒತ್ತು ನೀಡಲಿಲ್ಲ. ಅದಕ್ಕೊಂದು ನಿದರ್ಶನ ನನ್ನೂರಿನ ರಸ್ತೆ ಕಾಮಗಾರಿಯೇ ಸಾಕ್ಷಿಯಾಗಿತ್ತು. (ಆದ್ರೆ ಈಗ ಸಾಕ್ಷಿಯಾಗಿಲ್ಲ)
ಸುಮಾರು 20-25 ವರ್ಷಗಳ ಹಿಂದೆ ಎಂಜಿರದಿಂದ ಅರಸಿನಮಕ್ಕಿ ರಸ್ತೆ ಡಾಂಬರೀಕರಣ ಆಗಿತ್ತು. ಆನಂತರ ಡಾಂಬರೀಕರಣವೇ ಆಗಿರಲಿಲ್ಲ. 20-25 ವರ್ಷಗಳ ಹಿಂದೆ ಡಾಂಬರೀಕರಣ ಆಗಿದೆ ಅನ್ನೋದಕ್ಕೆ ಸಣ್ಣ ಕುರುಹುಗಳು ಮಾತ್ರ ಕಾಣುತ್ತಿತ್ತು. ದಿನ ನಿತ್ಯ ಓಡಾಡುವ ಜನರು ಹಿಡಿ ಶಾಪ ಹಾಕುತ್ತಿದ್ದರು. ಆದ್ರೆ ಅದನ್ನು ಸರಿಪಡಿಸಲು ಸಾಕಷ್ಟು ಹೋರಾಟ ನಡೆದ್ರೂ ಅದು ಪ್ರಯೋಜನಕ್ಕೆ ಬರಲಿಲ್ಲ.
ಆದ್ರೆ ಹರೀಶ್ ಪೂಂಜಾ ಅವರು ಶಾಸಕರಾದ ನಂತರ ಆ ರಸ್ತೆಗೆ ಡಾಂಬರೀಕರಣವಾಗಿದೆ. ಹೊಸ ರೂಪವನ್ನೂ ಕೂಡ ಪಡೆದುಕೊಂಡಿದೆ. ಅದೇ ರೀತಿ ಹಳ್ಳಿಯ ಬೇರೆ ಬೇರೆಯ ರಸ್ತೆಗಳಿಗೂ ಸಿಮೆಂಟ್ ರಸ್ತೆಗಳನ್ನು ಹಾಕುವ ಮೂಲಕ ನಮ್ಮೂರ ಹಳ್ಳಿಗೆ ಸರ್ಕಾರದ ಅನುದಾನ ಸಿಗುವಂತೆ ಮಾಡಿದ್ದವರು ಹರೀಶ್ ಪೂಂಜಾ ಅವರು.
ಇಲ್ಲಿಯ ತನಕ ಸರ್ಕಾರ ಯೋಜನೆಗಳು, ಅನುದಾನಗಳು ನಮ್ಮೂರ ಹಳ್ಳಿಗೆ ಬಂದಿರಲಿಲ್ಲ. ಎರಡು ಸರ್ಕಾರಿ ಶಾಲೆ, ಒಂದು ನೀರಿನ ಟ್ಯಾಂಕ್ ಬಿಟ್ಟು ಬೇರೆನೂ ಇರಲಿಲ್ಲ. ಇದೀಗ ಹೊಸ ಭರವಸೆ ಮೂಡಿದೆ. ಸರ್ಕಾರದ ಅನುದಾನಗಳಿಂದ ಬಸ್ ನಿಲ್ದಾಣ, ಆಟದ ಮೈದಾನ, ಸಮುದಾಯ ಭವನ, ಆರೋಗ್ಯ ಕೇಂದ್ರ ಕುಡಿಯುವ ನೀರು, ರಸ್ತೆಗಳನ್ನು ಶಾಸಕರು ನಿರ್ಮಾಣ ಮಾಡುತ್ತಾರೆ ಅನ್ನೋ ನಂಬಿಕೆ ಇದೆ.
ಅಂದ ಹಾಗೇ, ನಮ್ಮ ಶಾಸಕರು ಕಾರ್ಯವೈಖರಿಗೆ ಮನ ಸೋತಿರುವ ನಮ್ಮ ರೆಖ್ಯ ಗ್ರಾಮದಲ್ಲಿ ಬೇರೆ ಪಕ್ಷಗಳ ಬೆಂಬಲಿತ ಅಭ್ಯರ್ಥಿಗಳೇ ಕಣಕ್ಕಿಳಿದಿಲ್ಲ. ಒಂದು ಕಾಲದಲ್ಲಿ ಜೆಡಿಎಸ್, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು, ಕಾರ್ಯಕರ್ತರು ಇಂದು ಹರೀಶ್ ಪೂಂಜಾ ಕಾರ್ಯ ವೈಖರಿಯಿಂದ ಬಿಜೆಪಿಗೆ ಸೇರಿಕೊಂಡಿದ್ದಾರೆ.
ಹಾಗಂತ ಸ್ಪರ್ಧೆಯೇ ಇರಲಿಲ್ಲ ಅಂದುಕೊಳ್ಳಬೇಡಿ. ಸ್ಪರ್ಧೆಯೂ ಇತ್ತು. ಬಂಡಾಯವೂ ಇತ್ತು. ಬಿಜೆಪಿ ಕಾರ್ಯಕರ್ತರ ನಡುವಿನ ಸ್ವ ಪ್ರತಿಷ್ಠೆಯಿಂದಾಗಿ ಕೆಲವು ಬಿಜೆಪಿ ಬಂಡಾಯ ಅಭ್ಯರ್ಥಿಗಳು ಕಣಕ್ಕಿಳಿದಿದ್ದರು.
ಆದ್ರೆ ನಮ್ಮೂರ ಮತದಾರರು ಶಾಸಕರ ಕೆಲಸವನ್ನು ಮರೆಯಲಿಲ್ಲ. ಬಂಡಾಯ ಅಭ್ಯರ್ಥಿಗಳಿಗೆ ಮಣೆ ಹಾಕಲಿಲ್ಲ. ಎಲ್ಲಾ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಗೆದ್ದಿದ್ದಾರೆ. ಅದರಲ್ಲಿ ಬಹುತೇಕ ಯುವಕರೇ ಅನ್ನೋದು ಇನ್ನೊಂದು ವಿಶೇಷ.
ಹಾಗಂತ ಗೆದ್ದ ಅಭ್ಯರ್ಥಿಗಳು ಮೈಮರೆಯಬೇಡಿ. ಅಹಂಕಾರಪಡಬೇಡಿ. ನೀವು ಇವತ್ತು ಗೆದ್ದಿರೋದು ಶಾಸಕ ಹರೀಶ್ ಪೂಂಜಾ ಅವರ ಕಾರ್ಯವೈಖರಿಯಿಂದ ಎಂಬುದನ್ನು ನೆನಪಿಟ್ಟುಕೊಳ್ಳಿ. ಶಾಸಕರು ಇಡೀ ಕ್ಷೇತ್ರದಲ್ಲಿ ಮಾಡಿರುವ ಕೆಲಸ ಕಾರ್ಯಕಾರ್ಯಗಳನ್ನು ನೀವು ನಿಮ್ಮೂರಲ್ಲೂ ಮಾಡಬೇಕು. ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಹಾಗೇ ಸರ್ಕಾರದ ಅನುದಾನಗಳನ್ನು ಬಳಸಿಕೊಂಡು ಮಾದರಿ ಗ್ರಾಮವನ್ನು ನಿರ್ಮಾಣ ಮಾಡುವಂತಹ ಜವಾಬ್ದಾರಿ ನಿಮಗಿದೆ. ಅದಕ್ಕೆ ಇದು ಉತ್ತಮ ಅವಕಾಶವೂ ಹೌದು.
ಸನತ್ ರೈ
saakshatv.com








