ಇನ್ನು ಈ ಗೆಲುವು ಪಡೆಯಲು ಅರವಿಂದ ಕೇಜ್ರಿವಾಲ್ ಒಂದು ವರ್ಷದಿಂದಲೇ ತಯಾರಿ ಆರಂಭಿಸಿದ್ದರು. ದೆಹಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ತಕ್ಷಣ ಅರವಿಂದ್ ಕೇಜ್ರಿವಾಲ್ ಚುನಾವಣಾ ಪ್ರಚಾರದ ರೂಪುರೇಷೆ ತಯಾರು ಮಾಡಿದ್ದರು. ಆ ಯೋಜನೆಯಂತೆ ಪ್ರಚಾರ ನಡೆಸಿದ್ದು ಆಮ್ ಆದ್ಮಿ ಪಕ್ಷಕ್ಕೆ ಗೆಲುವು ತಂದು ಕೊಟ್ಟಿದೆ.
‘ಟಿಐಎನ್‌ಎ'( There Is No Alternative) ಎಂಬ ಹೆಸರಿನಲ್ಲಿ ಅರವಿಂದ್ ಕೇಜ್ರಿವಾಲ್ ಪ್ರಚಾರದ ತಂತ್ರವನ್ನು ರೂಪಿಸಿದ್ದರು.
ನಿಮ್ಮ ಸಿಎಂ ಅಭ್ಯರ್ಥಿ ಯಾರು?
ಪೂರ್ವ ಯೋಜನೆಯಂತೆ ಪ್ರಚಾರ ಆರಂಭಿಸಿದ ಎಎಪಿ ಬಿಜೆಪಿಗೆ ಕೇಳಿದ ಪ್ರಶ್ನೆ. ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರು?. ಸಿಎಂ ಅಭ್ಯರ್ಥಿ ಘೋಷಣೆ ಮಾಡದೆ ಬಿಜೆಪಿ ಚುನಾವಣೆ ಅಖಾಡಕ್ಕಿಳಿದಿತ್ತು. ಇದನ್ನು ಬಳಸಿಕೊಂಡ ಆಪ್, ನಿಮ್ಮ ಸಿಎಂ ಅಭ್ಯರ್ಥಿ ಯಾರೆಂದು ಘೋಷಿಸಿ ಎಂದು ಸವಾಲ್ ಹಾಕಿತು. ಪ್ರತಿದಿನ ಪ್ರಚಾರದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಬಿಜೆಪಿಗೆ ಪ್ರಶ್ನೆ ಕೇಳುತ್ತಲೇ ಇತ್ತು. ಅಲ್ಲದೆ ಸಿಎಂ ಅಭ್ಯರ್ಥಿ ಎಂಬ ವಿಡಿಯೋವೊಂದನ್ನು ಮಾಡಿ ಬಿಡುಗಡೆ ಮಾಡಿತ್ತು.
ಜನರ ಬೆಂಬಲ ಮರೆತ ಬಿಜೆಪಿ!
ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಬಿಜೆಪಿ ಘರ್ಜಿಸಿತ್ತು. ಆದ್ರೆ ಬಿಜೆಪಿ ದೆಹಲಿ ಚುನಾವಣಾ ಪ್ರಚಾರ ತಂತ್ರದಲ್ಲಿ ಇದನ್ನು ಬಳಸಿಕೊಳ್ಳಲೇ ಇಲ್ಲ.ಬದಲಾಗಿ ಪೌರತ್ವ ತಿದ್ದುಪಡೆ ಕಾಯ್ದೆ ವಿರೋಧಿಸಿ ದೆಹಲಿಯ ಶಾಹಿನ್ ಬಾಗ್‌ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಪ್ರಚಾರದಲ್ಲಿ ಬಳಸಿಕೊಂಡಿತು. ಆದರೆ, ಲೋಕಸಭಾ ಚುನಾವಣೆಯಲ್ಲಿ ದೆಹಲಿ ಜನರು ಬೆಂಬಲ ಕೊಟ್ಟಿದ್ದರು ಎಂಬುದನ್ನು ಮರೆಯಿತು.
ಉತ್ಸಾಹವನ್ನೇ ತೋರದ ಕಾಂಗ್ರೆಸ್!
ದೆಹಲಿ ಅಖಾಡದಲ್ಲಿ ಎಎಪಿ ಮತ್ತು ಬಿಜೆಪಿ ನಡುವಿನ ಪೈಪೋಟಿಯಲ್ಲಿ ಕಾಂಗ್ರೆಸ್ ಪಕ್ಷ ಕಾಣಿಸಲೇ ಇಲ್ಲ. ಪ್ರಚಾರದ ಶುರುವಿನಿಂದಲೇ ಕಾಂಗ್ರೆಸ್ 3ನೇ ಸ್ಥಾನಕ್ಕೆ ಹೋಗಿತ್ತು. ಇದು ಆಪ್ ಗೆ ವರದಾನವಾಯಿತು.