ಬಳ್ಳಾರಿ: ಬಳ್ಳಾರಿಯ (Ballari) ಸಂಡೂರು ವಿಧಾನ ಸಭಾ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಬಿಜೆಪಿ ಈಗಾಗಲೇ ಅಭ್ಯರ್ಥಿ ಘೋಷಿಸಿದೆ. ಆದರೆ, ಬಂಡಾಯದ ಬಿಸಿ ತಟ್ಟಿದೆ.
ಬಿಜೆಪಿ ಅಭ್ಯರ್ಥಿಯಾಗಿ ಬಂಗಾರು ಹನುಮಂತು ಕಣಕ್ಕೆ ಇಳಿದಿದ್ದು, ಬಿಜೆಪಿ (BJP) ಅಧಿಕೃತವಾಗಿ ಪ್ರಚಾರ ಆರಂಭಿಸಿದೆ. ಈಗಾಗಲೇ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಜೊತೆ ಜನಾರ್ದನ ರೆಡ್ಡಿ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ. ಆದರೆ, ಬಿಜೆಪಿಗೆ ಬಂಡಾಯದ ಬಿಸಿ ತಟ್ಟಿದೆ.
ಸಂಡೂರಿನಲ್ಲಿ (Sandur) ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಆಕಾಂಕ್ಷಿಯಾಗಿದ್ದ ಕೆಎಸ್ ದಿವಾಕರ್ಗೆ (K S Divakar) ಕೊನೆಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಿತ್ತು. ಆನಂತರ ಕೆಆರ್ ಪಿಪಿ ಪಕ್ಷ ಸೇರಿ ಸ್ಪರ್ಧಿಸಿದ್ದರು. ಆಗ 31 ಸಾವಿರ ಮತ ಪಡೆದು ಸೋಲು ಕಂಡಿದ್ದರು. ಆದರೂ ದಿವಾಕರ್ ಕ್ಷೇತ್ರದಲ್ಲಿ ಜನರಿಗೆ ಹತ್ತಿರವಾಗುವ ಕೆಲಸ ಮಾಡುತ್ತಿದ್ದರು.
ಆನಂತರ ಬದಲಾದ ರಾಜಕಾರಣದಲ್ಲಿ ಜನಾರ್ದನ ರೆಡ್ಡಿ ಬಿಜೆಪಿ ಪಕ್ಷ ಸೇರಿದ ನಂತರ ಕೆ.ಎಸ್. ದಿವಾಕರ್ ಕೂಡ ಬಿಜೆಪಿ ಸೇರಿದ್ದರು. ಸಂಡೂರಲ್ಲಿ ತಾನೆ ಮುಂದಿನ ಅಭ್ಯರ್ಥಿ ಎಂದು ಸ್ವಯಂ ಘೋಷಣೆ ಕೂಡ ಮಾಡಿಕೊಂಡಿದ್ದರು. ಆದರೆ, ಈಗ ಟಿಕೆಟ್ ಕೈ ತಪ್ಪಿದ್ದರಿಂದಾಗಿ ಅಸಮಾಧಾನಗೊಂಡಿದ್ದಾರೆ. ಜನಾರ್ದನ ರೆಡ್ಡಿ ಮನೆಯಲ್ಲಿ ಸಂಧಾನ ಸಭೆ ಮಾಡಿದರೂ ದಿವಾಕರ್ ಅಸಮಾಧಾನಗೊಂಡಿದ್ದಾರೆ. ನನ್ನ ವಿಚಾರದಲ್ಲಿ ಡಬಲ್ ಗೇಮ್ ಮಾಡಿದರು ಎಂದು ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ ಬಿಜೆಪಿಗೆ ಇದು ತಲೆನೋವಾಗಿ ಪರಿಣಮಿಸಿದೆ.