ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್ ವಿರುದ್ದ ಅತ್ಯಾಚಾರದ ಆರೋಪ
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಾಯಕ ರಿಯಾಜ್ ಬಾಟಿ ಅವರ ಪತ್ನಿ ರೆಹನುಮಾ ಭಾಟಿ ಅವರು ಭಾರತೀಯ ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಮುನಾಫ್ ಪಟೇಲ್ ವಿರುದ್ಧ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಿಯಾಜ್ ಭಾಟಿ ಪತ್ನಿ ಮುಂಬೈ ಪೊಲೀಸರಿಗೆ ದೂರು ಸಲ್ಲಿಸಿದ್ದು, ತನ್ನ ಪತಿ ಅತ್ಯಾಚಾರ ಮತ್ತು ಹೈ ಪ್ರೊಫೈಲ್ ಸೆಕ್ಸ್ ರಾಕೆಟ್ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾಳೆ. ದೂರಿನಲ್ಲಿ ಪತಿಯ ಹೆಸರಿನ ಜೊತೆಗೆ, ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ ಮತ್ತು ಮುನಾಫ್ ಪಟೇಲ್, ಹಿರಿಯ ಕಾಂಗ್ರೆಸ್ ನಾಯಕ ಮತ್ತು ಬಿಸಿಸಿಐ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಪೃಥ್ವಿರಾಜ್ ಕೊಠಾರಿ ವಿರುದ್ಧವೂ ಆರೋಪ ಮಾಡಿದ್ದಾರೆ.
ತನ್ನ ಪತಿ ರಿಯಾಜ್ ಭಾಟಿ ತನ್ನ ಬಿಸನೆಸ್ ಪಾರ್ಟನರ್ ಮತ್ತು ಇತರ “ಉನ್ನತ” ವ್ಯಕ್ತಿಗಳೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದುವಂತೆ ಒತ್ತಾಯಿಸುತ್ತಿದ್ದರು ಎಂದು ರೆಹನುಮಾ ಭಾಟಿ ಆರೋಪಿಸಿದ್ದಾರೆ.
ಆದರೆ, ಅತ್ಯಾಚಾರ ಆರೋಪ ಮಾಡಿರುವವರ ವಿಳಾಸವನ್ನು ರೆಹನುಮಾ ಭಾಟಿ ಉಲ್ಲೇಖಿಸಿಲ್ಲ. ಏತನ್ಮಧ್ಯೆ, ಘಟನೆಗಳು ಸಂಭವಿಸಿದ ನಿರ್ದಿಷ್ಟ ದಿನಾಂಕಗಳು ಅಥವಾ ಸ್ಥಳಗಳನ್ನು ದೂರಿನಲ್ಲಿ ಉಲ್ಲೇಖಿಸಿಲ್ಲ. ಆದಾಗ್ಯೂ, ಅವರು ಪಾಂಡ್ಯ ಮತ್ತು ಪಟೇಲ್ ಅಲ್ಲದೆ, ಶುಕ್ಲಾ ಅವರನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ.