ಎನ್‌ಸಿಇಆರ್‌ಟಿ ರೂಪಿಸಿದ ವಿದ್ಯಾರ್ಥಿಗಳ ಕಲಿಕಾ ವರ್ಧನೆ ಮಾರ್ಗಸೂಚಿ ಬಿಡುಗಡೆ
ಹೊಸದಿಲ್ಲಿ, ಅಗಸ್ಟ್20: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ರೂಪಿಸಿದ ಮಾರ್ಗಸೂಚಿಗಳನ್ನು ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಲ್ ‘ನಿಶಾಂಕ್’ ಬಿಡುಗಡೆ ಮಾಡಿದ್ದಾರೆ.
ಪಂಚಾಯತ್ ಸಹಾಯದಿಂದ ಸಮುದಾಯ ಕೇಂದ್ರದಲ್ಲಿ ಸಹಾಯವಾಣಿ ಸ್ಥಾಪಿಸುವುದು ಮತ್ತು ಡಿಜಿಟಲ್ ಸಂಪನ್ಮೂಲಗಳಿಲ್ಲದ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ಸ್ವಯಂಸೇವಕರ ತಂಡವನ್ನು ರಚಿಸುವುದು ಬುಧವಾರ ಘೋಷಿಸಲಾದ ವಿದ್ಯಾರ್ಥಿಗಳ ಕಲಿಕಾ ವರ್ಧನೆ ಮಾರ್ಗಸೂಚಿಗಳಲ್ಲಿ ಪಟ್ಟಿ ಮಾಡಲಾದ ಕೆಲವು ಕ್ರಮಗಳಲ್ಲಿ ಸೇರಿವೆ.
ಈ ಮಾರ್ಗಸೂಚಿಗಳಲ್ಲಿ ಪುಸ್ತಕಗಳು, ವರ್ಕ್‌ಶೀಟ್‌ಗಳು ಮುಂತಾದ ಕಲಿಕಾ ಸಾಮಗ್ರಿಗಳನ್ನು ಮಕ್ಕಳ ಮನೆ ಬಾಗಿಲಿಗೆ ಶಿಕ್ಷಕರು ಮತ್ತು ಸ್ವಯಂಸೇವಕರು ತಲುಪಿಸಲು ಒತ್ತು ನೀಡಲಾಗಿದೆ. ಸ್ಥಳೀಯ ವಿದ್ಯಾರ್ಥಿಗಳಿಗೆ ಸ್ವಯಂಸೇವಕರು ಅಥವಾ ಶಿಕ್ಷಕರು ಸಮುದಾಯ ಕೇಂದ್ರದಲ್ಲಿ ದೂರದರ್ಶನದ ವ್ಯವಸ್ಥೆಯನ್ನು ರೂಪಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ. ಸಮುದಾಯದ ಸದಸ್ಯರು ಮತ್ತು ಪಂಚಾಯತ್ ಸಹಾಯದಿಂದ ಸಮುದಾಯ ಕೇಂದ್ರದಲ್ಲಿ ಸಹಾಯವಾಣಿ ಸ್ಥಾಪಿಸುವ ಬಗ್ಗೆಯೂ ಅವರು ಮಾತನಾಡಿದ್ದು, ತಮ್ಮ ಮಕ್ಕಳ ಕಲಿಕೆಗೆ ಪೋಷಕರ ಸಲಹೆ ಸೂಚನೆಗಳನ್ನು ಇದು ಶಿಫಾರಸು ಮಾಡುತ್ತದೆ ಎಂದು ರಮೇಶ್ ಪೋಖ್ರಿಯಲ್ ತಿಳಿಸಿದರು.
ನಿರಂತರ ಕಲಿಕಾ ಯೋಜನೆ ಶಿಕ್ಷಣ ಸಚಿವಾಲಯದ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳು, ಕೇಂದ್ರೀಯ ವಿದ್ಯಾಲಯ ಸಂಘಟನೆ, ನವೋದಯ ವಿದ್ಯಾಲಯ ಸಮಿತಿ ಮತ್ತು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಶಾಲೆಗಳಲ್ಲಿ ಡಿಜಿಟಲ್ ಸಂಪನ್ಮೂಲಗಳ ಪ್ರವೇಶದ ಬಗ್ಗೆ ಎನ್‌ಸಿಇಆರ್‌ಟಿ ಕೈಗೊಂಡ ಸಮೀಕ್ಷೆಯ ಆಧಾರದ ಮೇಲೆ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ಡಿಜಿಟಲ್ ಸಂಪನ್ಮೂಲಗಳನ್ನು ಹೊಂದಿರದ ಮಕ್ಕಳಿಗೆ, ತಮ್ಮ ಶಿಕ್ಷಕರು ಅಥವಾ ಸ್ವಯಂಸೇವಕರೊಂದಿಗೆ ತಮ್ಮ ಮನೆಗಳಲ್ಲಿ ಕಲಿಕೆಯ ಅವಕಾಶಗಳನ್ನು ಪಡೆಯಲು ಸೂಚಿಸಲಾಗಿದೆ. ಇದಲ್ಲದೆ, ರೇಡಿಯೋ, ಟೆಲಿವಿಷನ್ ಅಥವಾ ಸ್ಮಾರ್ಟ್‌ಫೋನ್ ಬಳಸಿ ವಿವಿಧ ಪರ್ಯಾಯ ಮಾರ್ಗಗಳ ಮೂಲಕ ಮನೆಯಲ್ಲಿ ಕಲಿಯುತ್ತಿರುವ ಎಲ್ಲ ವಿದ್ಯಾರ್ಥಿಗಳ ಕಲಿಕೆಯ ಕೊರತೆಯನ್ನು ನೀಗಿಸುವ ನಮ್ಮ ಪ್ರಯತ್ನಗಳಿಗೆ ಇದು ಸಹಾಯ ಮಾಡುತ್ತದೆ ಎಂದು ನಿಶಾಂಕ್ ಹೇಳಿದರು.
ಮೂರು ರೀತಿಯ ಮಾರ್ಗಸೂಚಿಗಳು ಮತ್ತು ಮಾದರಿಗಳನ್ನು ಸೂಚಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದು, ಮೊದಲನೆಯದಾಗಿ, ಇದರಲ್ಲಿ ವಿದ್ಯಾರ್ಥಿಗಳಿಗೆ ಯಾವುದೇ ಡಿಜಿಟಲ್ ಸಂಪನ್ಮೂಲಗಳಿಲ್ಲ. ಎರಡನೆಯದಾಗಿ, ಇದರಲ್ಲಿ ವಿದ್ಯಾರ್ಥಿಗಳು ಸೀಮಿತ ಡಿಜಿಟಲ್ ಸಂಪನ್ಮೂಲಗಳನ್ನು ಹೊಂದಿದ್ದಾರೆ. ಕೊನೆಯದಾಗಿ, ಇದರಲ್ಲಿ ವಿದ್ಯಾರ್ಥಿಗಳು ಆನ್‌ಲೈನ್ ಶಿಕ್ಷಣಕ್ಕಾಗಿ ಡಿಜಿಟಲ್ ಸಂಪನ್ಮೂಲಗಳನ್ನು ಹೊಂದಿದ್ದಾರೆ, ಎಂದು ಅವರು ಹೇಳಿದರು.
ಕೋವಿಡ್-19 ಹಿನ್ನೆಲೆಯಲ್ಲಿ ಮಾರ್ಚ್ 16 ರಿಂದ ದೇಶಾದ್ಯಂತ ವಿಶ್ವವಿದ್ಯಾಲಯಗಳು ಮತ್ತು ಶಾಲೆಗಳನ್ನು ಮುಚ್ಚಲಾಗಿದೆ.