ಚಿತ್ರದುರ್ಗ : ಕೋವಿಡ್ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಆರೋಗ್ಯ ಸಚಿವ ಶ್ರೀರಾಮುಲು, ದಾಖಲೆಗಳನ್ನು ಬಿಡುಗಡೆ ಮಾಡಿ, ಯಾರು ಜೈಲಿಗೆ ಹೋಗಬೇಕೋ ಅವರು ಜೈಲಿಗೆ ಹೋಗುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, “ಮುರುಘೇಶ್ ನಿರಾಣಿ ಬಳಿ ಸಲಕರಣೆ ಖರೀದಿ ಅವ್ಯವಹಾರದ ದಾಖಲೆ ಇದೆ ಎಂಬ ಸಿದ್ದರಾಮಯ್ಯ ಅವರಿಗೆ ಈ ಕುರಿತು ಯಾವುದೇ ದಾಖಲೆ ಇದ್ದರು ಬಿಡುಗಡೆ ಮಾಡುವ ಸ್ವತಂತ್ರ ಇದೆ. ಅದರ ಬದಲು ಭ್ರಷ್ಟಾಚಾರ, ಅವ್ಯವಹಾರ ಆಗಿದೆ ಎಂದು ಯಾಕೆ ಮಾತನಾಡುತ್ತಿದ್ದಾರೆ ಗೊತ್ತಾಗುತ್ತಿಲ್ಲ. ಸಿದ್ದರಾಮಯ್ಯ 2 ಸಾವಿರ ಕೋಟಿ ರೂ ಅವ್ಯವಹಾರ ಆಗಿದೆ ಎಂದು ಹೇಳುತ್ತಿದ್ದಾರೆ. ಕೋವಿಡ್ ಸಲಕರಣೆಗಳ ಖರೀದಿ ಮಾಡಲು ಖರ್ಚಾಗಿರುವುದು 500 ರಿಂದ 600 ಕೋಟಿ ಮಾತ್ರ. ಹೀಗಿದ್ದಾಗ 2 ಸಾವಿರ ಕೋಟಿ ಎಲ್ಲಿಂದ ಭ್ರಷ್ಟಾಚಾರ ಆಗಿದೆ ಎಂದು ಗೊತ್ತಾಗುತ್ತಿಲ್ಲ. ಉಪ್ಪು ತಿಂದ ಮೇಲೆ ನೀರು ಕುಡಿಯಬೇಕು, ದಾಖಲೆಗಳಿದ್ದರೆ ಬಿಡುಗಡೆ ಮಾಡಿ ಎಂದು ಸವಾಲ್ ಹಾಕಿದ ರಾಮುಲು, ಸಿದ್ದರಾಮಯ್ಯ ಅವರೇ ಯಾಕೆ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದೀರಾ..? ಎಂದು ಪ್ರಶ್ನಿಸಿದರು.
ಈ ಹಿಂದೆ ಸವಾಲು ಹಾಕಿ, ಬಳ್ಳಾರಿ ಬ್ರದರ್ಸ್ ಜೈಲಿಗೆ ಹೋಗಿದ್ದನ್ನು ನೆನಪಿಸಿಕೊಳ್ಳಬೇಕು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ರಾಮುಲು, ಎಕ್ಸ್ ಪೈರಿ ಡೇಟ್ ಗಳನ್ನು ನೆನಪಿಸಿಕೊಳ್ಳುವುದರಿಂದ ಇವತ್ತಿನ ತಪ್ಪುಗಳನ್ನು ಸರಿ ಎಂದು ಒಪ್ಪಿಕೊಳ್ಳಲು ಆಗುವುದಿಲ್ಲ. ದಾಖಲೆಗಳನ್ನು ಬಿಡುಗಡೆ ಮಾಡಿ, ಯಾರು ಜೈಲಿಗೆ ಹೋಗಬೇಕೋ ಅವರು ಜೈಲಿಗೆ ಹೋಗುತ್ತಾರೆ ಎಂದು ಹರಿಹಾಯ್ದಿದ್ದಾರೆ.