ವಿದೇಶದಿಂದಲೂ ರೆಮ್ ಡಿಸಿವಿರ್ ಆಮದು : ಡಾ.ಕೆ.ಸುಧಾಕರ್
ಬೆಂಗಳೂರು : ವೆಂಟಿಲೇಟರ್ ಲಭ್ಯತೆಯನ್ನು 10 ಪಟ್ಟು ಹೆಚ್ಚಿಸಲು ಮುಖ್ಯಮಂತ್ರಿಗಳು ಸೂಚಿಸಿದ್ದು, ಇದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಜೊತೆಗೆ ಬೆಂಗಳೂರಿನ ಆಸ್ಪತ್ರೆಗಳ ಆವರಣದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆ ಬರಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬೆಂಗಳೂರಿನಲ್ಲಿ ಆಕ್ಸಿಜನ್ ಹಾಸಿಗೆ, ಐಸಿಯು ಹಾಸಿಗೆ, ವೆಂಟಿಲೇಟರ್ ಕೊರತೆಯಾಗುತ್ತಿದೆ. 15 ದಿನದೊಳಗೆ ಕನಿಷ್ಠ 2 ಸಾವಿರ ಐಸಿಯು ಹಾಸಿಗೆಯ ಮೇಕ್ ಶಿಫ್ಟ್ ಆಸ್ಪತ್ರೆ ಮಾಡಲಾಗುವುದು.
2 ಸಾವಿರದ ಪೈಕಿ 800 ಕ್ಕೆ ವೆಂಟಿಲೇಟರ್ ಅಳವಡಿಕೆಯಾಗಲಿದೆ. ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲೇ ಮೇಕ್ ಶಿಫ್ಟ್ ನಲ್ಲಿ 250 ಹಾಸಿಗೆಯ ಐಸಿಯು, ಇನ್ನೊಂದು ಹೊಸ ಕಟ್ಟಡದಲ್ಲಿ 150-200 ಹಾಸಿಗೆಯ ಐಸಿಯು ಮಾಡಲಾಗುತ್ತಿದೆ.
250 ಹಾಸಿಗೆಯ ಐಸಿಯುನಲ್ಲಿ 100 ಕ್ಕೆ ವೆಂಟಿಲೇಟರ್ ಅಳವಡಿಸಲಾಗಿರುತ್ತದೆ. ಬೌರಿಂಗ್, ನಿಮ್ಹಾನ್ಸ್, ರಾಜೀವ್ ಗಾಂಧಿ ಮೊದಲಾದ ಕಡೆ ಮೇಕ್ ಶಿಫ್ಟ್ ಆಸ್ಪತ್ರೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ರೆಮ್ ಡಿಸಿವಿರ್ ವೈಲ್ ಗಳು ನಿರಂತರ ಪೂರೈಕೆಯಾಗುತ್ತಿದೆ. ಹೆಚ್ಚುವರಿಯಾಗಿ 25 ಸಾವಿರ ಪಡೆಯಲು ಕೇಂದ್ರ ರಾಸಾಯನಿಕ ಸಚಿವ ಡಿ.ವಿ.ಸದಾನಂದಗೌಡ ಅವಕಾಶ ಮಾಡಿಕೊಟ್ಟಿದ್ದಾರೆ.
ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಮ್‍ದಾರ್ ಷಾ ಅವರೊಂದಿಗೂ ಚರ್ಚಿಸಿದ್ದು, 10 ದಿನದೊಳಗೆ 10 ಸಾವಿರ ವೈಲ್ ಕೊಡುವುದಾಗಿ ಹೇಳಿದ್ದಾರೆ. ಈ ತಿಂಗಳಲ್ಲೇ 50-60 ಸಾವಿರ ವೈಲ್ ನೀಡುವುದಾಗಿ ತಿಳಿಸಿದ್ದಾರೆ.
ವಿದೇಶದಿಂದ ಒಂದೇ ಬಾರಿಗೆ 2 ಲಕ್ಷ ರೆಮ್ ಡಿಸಿವಿರ್ ವೈಲ್ ತರಿಸಿಕೊಳ್ಳಲು ಸಿದ್ಧತೆ ಮಾಡುತ್ತಿದ್ದೇವೆ. ಇದಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಬೇಕಿದೆ. ಇಷ್ಟು ದೊರೆತರೆ, 15-20 ದಿನಕ್ಕೆ ಸಾಲುತ್ತದೆ ಎಂದು ತಿಳಿಸಿದರು.
ಕೆಲ ದೇಶಗಳಲ್ಲಿ 3 ಅಲೆ ಕೂಡ ಬಂದಿದ್ದು, ಒಂದೂವರೆ ತಿಂಗಳು ಲಾಕ್ ಡೌನ್ ಮಾಡಲಾಗಿದೆ. ಆದರೆ ನಮ್ಮಲ್ಲಿ ಎಲ್ಲ ಚಟುವಟಿಕೆಗೆ ಅವಕಾಶ ಮಾಡಿಕೊಟ್ಟು ಕೊರೊನಾ ನಿಯಂತ್ರಿಸಲಾಗುತ್ತಿದೆ.
ಈಗ ಎಲ್ಲ ಚಟುವಟಿಕೆಗೆ ಅವಕಾಶ ನೀಡಿ, ಸೋಂಕು ನಿಯಂತ್ರಿಸಿ ಎಂದರೆ ಹೇಗೆ? ಈ ವಿಚಾರದಲ್ಲಿ ರಾಜಕೀಯ ಬೆರೆಸಬಾರದು ಎಂದರು.










