ಮಳೆಯಲಿ ಜೊತೆಯಲಿ ಬಾಲ್ಯದ ನೆನಪಿನಲಿ
ಮಳೆ ಎಂದಾಕ್ಷಣ ಅತೀವೃಷ್ಟಿ ಅನಾವೃಷ್ಟಿ ಸಾಧಾರಣ ಎನ್ನುವ ರೀತಿಯಲ್ಲಿ ಮಳೆಯು ಅನುಭವಕ್ಕೆ ಬರುತ್ತದೆ. ಈ ಮಳೆ ಅಂದು ಇಂದು ಸಹಜವಾಗಿ ಸುರಿದು ಹೋಗುತ್ತಿದೆಯಾದರೂ ಅಂದಿನ ನಮ್ಮ ಬಾಲ್ಯದಲ್ಲಿನ ಮಳೆಯ ಜೊತೆಗಿನ ಅನುಭವ ಆದೇನೋ ಸುಂದರ ನೆನಪುಗಳೇ.. ತುಂಬಾ ಚೆಂದ. ಸಾಲು ಸಾಲಾಗಿ ಕಣ್ಣ ಮುಂದೆ ಹಾದು ಹೋಗುತ್ತಿರುತ್ತದೆ. ಆ ಕುರಿತಂತೆ ಒಂದಿಷ್ಟು ಮಳೆಯಲಿ ಜೊತೆಯಲಿ ಬಾಲ್ಯದ ನೆನಪುಗಳ ಬುತ್ತಿ ಬಿಚ್ಚಿಡುವೆನು.
ಆಗೆಲ್ಲಾ ಶಾಲೆಗೆ ಹೊರಡುವಾಗ ಇದ್ದ ಒಂದು ಒಳ್ಳೆಯ ಕೊಡೆಗೆ ಹೊಡೆದಾಟ , ಬಡಿದಾಟ ,ಕೂಗು, ಮುನಿಸು ಮೌನ ಆಮೇಲೆ ದೊಡ್ಡ ಕ್ಲಾಸಿನವರು ಯಾರು ಅವರಿಗೆ ಕೊಡೆ ದಕ್ಕುತ್ತಿತ್ತು. ನಾವು ಸಣ್ಣವರು ಸಣ್ಣ ಕ್ಲಾಸ್ ನವರು ಎಂಬ ಕಾರಣಕ್ಕೆ ಹೊಸ ಕೊಡೆಯ ವಂಚಿತರಾಗಿ ಹಳೇ ಕೊಡೆಯಲ್ಲೇ ಶಾಲೆಗೆ ಹೊರಡುತ್ತಿದ್ದೆವು. ಅಯ್ಯೋ ಶಾಲೆಗೆ ಹೊರಟಾಗಲೇ ಮಳೆ ಬರಬೇಕೇ? ಸಂಜೆ ಶಾಲೆ ಬಿಡುವಾಗಲೂ ಮತ್ತೆ ಅದೇ ಗಜಿಬಿಜಿ. ನಾವು ಕೊಡೆ ತರದಿದ್ದಲ್ಲಿ ಶಾಲೆ ಬಿಡುವ ಹೊತ್ತಿಗೆ ಮನೆಯವರೇ ಬಂದು ಶಾಲೆಯಲ್ಲಿ ಕಾಯುತ್ತಿದ್ದರು. ಮನೆ ಸೇರಿ ಮುಸ್ಸಂಜೆ, ರಾತ್ರಿಯಾಗುತ್ತಲೇ ನಮ್ಮ ಬಿಸಿ ನೀರಿನ ಸ್ನಾನ ಖುಷಿಕೊಡುತ್ತಿತ್ತು.
ಮನೆಯ ಹತ್ತಿರದ ಗದ್ದೆ ಬದಿಯಿಂದಲೋ ,ಹಳ್ಳ ಕೊಳ್ಳಗಳಿಂದಲೋ, ಒಂದೇ ಸವನೆ ಕಪ್ಪೆಗಳ ವಟವಟ ಆರ್ಭಟ ಅದೇನೋ ಸ್ಪರ್ಧೆಯೇನೋ ಎಂದು ನಾವೆಲ್ಲರೂ ಮಾತಾನಾಡಿಕೊಂಡದ್ದು ಇದೆ. ನಾವು ಕೂಡ ಅಷ್ಟೇ ಹೊಸ ಪಾಠ ಪುಸ್ತಕ ಸಿಕ್ಕಿದ ಖುಷಿಯಲ್ಲಿ ಜೋರಾಗಿ ಕಪ್ಪೆಗಳು ವಟಗುಟ್ಟುವಂತೆ ಓದುತ್ತಿದ್ದೆವು. ಅದರಲ್ಲಿ ತಪ್ಪು ಸರಿಗಳು ಹಾಗೆಯೇ ಸಾಗುತ್ತಿತ್ತು. ಏನದು? ಇನ್ನೊಮ್ಮೆ ಓದು ಎಂದು ಮನೆಯವರು ಗದರಿಸಿದಾಗ ಧ್ವನಿ ಸ್ವಲ್ಪ ಸಣ್ಣದಾಗುತಿತ್ತು.. ಮತ್ತೆ ಪುನಃ ಶುರುವಾಯಿತು ಓದಿನ ಜೋಶ್. ಈ ಮಧ್ಯೆ ದೀಪದ ಬೆಳಕಿಗೆ ಮಿಡತೆಗಳ ಕಾಟ. ಅದರಲ್ಲೂ ಹಸಿರು ಮಿಡತೆ ನಮ್ಮ ಹತ್ತಿರ ಬಂದರಂತೂ ಅಪ್ಪ ಅಮ್ಮ ಅಜ್ಜಿ ಅಜ್ಜ ಅಂತಲೋ ಹೆದರಿ ಬೊಬ್ಬಿರಿಯುತ್ತಿದ್ದೆವು.. ಈ ಹಾತೆಗಳ ಕಾಟಕ್ಕೆ ಅಮ್ಮ ಮಾಡುತ್ತಿದ್ದ ಉಪಾಯ ಜಾಣತನದೇ ಸರಿ. ಅದೇನೆಂದರೆ ನಾವು ಊಟ ಮಾಡುವ ತಟ್ಟೆ ಇದೆಯಲ್ಲ ಅದಕ್ಕೆ ನೀರು ಹಾಕಿ ಅದರ ಮಧ್ಯೆ ಚಿಮಿಣಿ ದೀಪ ಇಟ್ಟಾಗ ಬೆಳಕಿಗೆ ಮುತ್ತಿಕ್ಕುವ ಹಾತೆಗಳು ನೀರಿಗೆ ಬಿದ್ದುಹೋಗುತ್ತಿದ್ದವು. ಮತ್ತೆ ಅವುಗಳ ಚಡಪಡಿಕೆ ಅಸಹಾಯಕತೆ ನೋಡಿ ಖುಷಿ ಪಡುತ್ತಿದ್ದೆವು.. ಮಳೆ ನಿಂತು ಹೋದ ಮೇಲೆ ಹೊರಗೆ ನೋಡಿದರೆ ಮರಗಳಲೆಲ್ಲಾ ನೋಡುವ ಕಣ್ಣಿಗೆ ಹಬ್ಬವೇ ಮಿಂಚುಹುಳುಗಳ ಬೆಳಕಿನ ಕಾಂತಿ. ಕೆಲವೊಂದು ಮನೆಯೊಳಗೆ ಬಂದಾಗಲೆಲ್ಲಾ ಹಿಡಿದು ಬಾಟಲಿಗಳಲ್ಲಿ ಸಂಗ್ರಹಿಸಿಡುತ್ತಾ ಅದರ ಬೆಳಕಿಗೆ ಹಾಗೂ ಸೃಷ್ಟಿಯ ವೈಶಿಷ್ಟ್ಯತೆ ಬೆರಗಾಗುತ್ತಿದ್ದೆವು.
ಹಾಗೆಯೇ ಗುಡುಗು ಸಿಡಿಲು ಗಾಳಿ ಬಂತೆಂದರೆ ಊರಲ್ಲಿ ಕರೆಂಟ್ ಇಲ್ಲವೇ ಇಲ್ಲ. ಬೀದಿ ದೀಪಗಳು ಕೆಟ್ಟು ಹೋದರೆ ಅಷ್ಟೇ. ಒಂದೆರಡು ಜೋತು ಬಿದ್ದದ್ದು ಇದೆ. ಮತ್ತೆ ಕರೆಂಟ್ ಬಂದರೆ ಮರುದಿನವಷ್ಟೇ . ಊರಿಗೆ ಊರೇ ಕಗ್ಗತ್ತಲೇ ಖಂಡವಾಗಿಬಿಡುತ್ತಿತ್ತು.. ಈ ಮಧ್ಯೆ ಸುರಿವ ಮಳೆಗೆ ಟಾರ್ಚ್ ಬೆಳಕಿನಲ್ಲಿ ಅಪ್ಪ ಊರ ಅಂಗಡಿಗೆ ಹೋಗಿ ಮನೆಗೆ ಬರುವ ನೆನಪು ಸದಾ ಹಸಿರಾಗಿದೆ. ಆದರೆ ಭೌತಿಕವಾಗಿಯೂ ಇಂದು ನಮ್ಮೊಂದಿಗೆ ಇಲ್ಲ ಎನ್ನುವ ನೋವು ಇದೆ. ಒಮ್ಶೊಮ್ಮೆ ಶಾಲೆಗೆ ಹೋಗುವಾಗೆಲ್ಲ ಗೆಳೆಯರಾದ ನಾವು ಒಬ್ಬನ ಕೊಡೆಯ ಜೊತೆ ಸೇರಿ ಕೆಸರು ರಟ್ಟಿಸುತ್ತಲೇ ತುಂಬಿದ ನೀರಿನ ಮಧ್ಯೆ ದೊಡ್ಡ ಹೆಜ್ಜೆ ಹಾಕುತ್ತಲೇ ಶಾಲೆಗೆ ಬರುತ್ತಿದ್ದೆವು. ಅಂತೂ ನಾವೆಲ್ಲರೂ ಸೇಪ್ …. ಆದರೆ ಕೊಡೆ ತಂದವರು ಪೂರ್ತಿ ಒದ್ದೆ. ಮಳೆಗೆ ಜಾರಿ ಬಿದ್ದದೆಷ್ಟೋ, ಒದ್ದೆಯಾದದ್ದು, ಮಣ್ಣು ಮೆತ್ತಿಕೊಂಡದ್ದು, ಇದಕ್ಕೆಲ್ಲಾ ಸ್ನಾನ ಮಾಡಿಸುತ್ತಲೇ ಅಮ್ಮನ ಪೆಟ್ಟು ಬೈಗುಳ ಇದ್ದದೇ.. ಆಗ ಅಪ್ಪನ ಒಂದು ಧ್ವನಿಗೆ ಅಮ್ಮ ಮೌನ , ನಾವು ಬಚಾವು ಆಗುತ್ತಿದ್ದೆವು.
ಶಾಲೆಯಲ್ಲಿ ಶಿಕ್ಷಕರು ಕೂಡ ಜೋರು ಮಳೆ ಬಂದಾಗಲೆಲ್ಲ ತೆಗೆದುಕೊಳ್ಳುತ್ತಿದ್ದ ಕಾಳಜಿ ಹಳೇ ಕೊಡೆಗಳಿದ್ದರೇ ಇಲ್ಲದವರಿಗೆ ಹುಡುಕಿ ಕೊಟ್ಟು ನಾಳೆ ನೆನಪಿನಲಿ ತಂದು ಕೊಡಿರಿ ಎಂದು ಎಚ್ಚರಿಸುತ್ತಿದ್ದರು. ಇದೆಲ್ಲಾ ಇಂದಿಗೂ ಅವಿಸ್ಮರಣೀಯವಾದುದು. ಆ ಎಲ್ಲಾ ಗುರು ಬಾಂಧವರು ಇಂದಿಗೂ ಪ್ರಾತಃಸ್ಮರಣೀಯರು ಅನುಸರಣೀಯರು ಆಗಿದ್ದಾರೆ. ಇಂದು ಶಿಕ್ಷಕರಾದವರು ನಾವು ಅದೇ ಜಾಗ್ರತೆಯನ್ನು ಇಂದಿನ ಮಕ್ಕಳಿಗೆ ಹೇಳುತ್ತಿರಬಹುದು ಅಲ್ವೇ?
ಹಾಗೆಯೇ ಮನೆಯ ಹತ್ತಿರದ ಎದುರು ಗದ್ದೆಯಲ್ಲಿ ಒದ್ದೆಯಾಗುತ್ತಲೇ ಗದ್ದೆ ಉಳುವ ಗಂಡಸರು , ಒದ್ದೆಯಾಗುತ್ತಲೇ ಉತ್ಸಾಹದಿಂದ ಹಾಡು ಹೇಳುತ್ತಾ ಮತ್ತೊಮ್ಮೆ ಜೋರಾಗಿ ನಗುತ್ತಾ ಮಧ್ಯೆ ತಮಾಷೆಯಲ್ಲಿ ಬೈಯುತ್ತಾ ಪುನಃ ಹಾಡು ಹಾಡುತ್ತಾ ಸಾಗುತ್ತಲೇ ನೆಟ್ಟ ನೇಜಿ ಗದ್ದೆಯನ್ನು ಪೂರ್ತಿ ಹಸಿರಾಗಿಸಿತು.ನೇಜಿ ನೆಡುವ ಅನಕ್ಷರಸ್ಥ ಹೆಂಗಸರಾದರೂ ವಿದ್ಯಾವಂತರೇ ನಾಚುವಂತೆ ಸಂತೋಷದಿ ಹಾಡುತ್ತಾ ದಣಿವು ಹಸಿವು ಏನೂ ಕಾಣದೇ ಉಲ್ಲಾಸದಿ ಹಾಡುತ್ತಿದ್ದರು.. ಅಂದು ಅವರ ಹಾಡಿದ ಹಾಡಿನ ಜನಪದ ಸಾಹಿತ್ಯದ ಮೌಲ್ಯ ಇಂದು ಮಹತ್ವದೆನಿಸಿದೆ. ಮೌಖಿಕ ಜನಪದ ಸಾಹಿತ್ಯ ಇಂದು ವಿಷಯ ಸಂಗ್ರಹದಲಿ ಕಾರ್ಯ ಗಳು ನಿರಂತರವಾಗಿದೆ .ಇದೆಲ್ಲವನ್ನೂ ದೂರದಿಂದಲೇ ನೋಡುವುದೇ ಕಣ್ಣಿಗೆ ಹಬ್ಬ. ಅದೂ ಕೂಡ ಪಿರಿ ಪಿರಿ ಮಳೆಯ ಮಧ್ಯೆ .
ಸುತ್ತ ಮುತ್ತಲಿನ ಮನೆಯ ಗೆಳೆಯರೆಲ್ಗರೂ ಒಟ್ಟಾಗಿ ಶಾಲೆಗೆ ಹೋಗುತ್ತಲೇ ಒಂದಿಷ್ಟು ಹೊತ್ತು ಮತ್ತೆ ಸಂಜೆ ಪುನಃ ಮನೆ ಸೇರುವ ಮೊದಲು ಒಂದಿಷ್ಟು ಹೊತ್ತು ಅಲ್ಲೇ ಇರುತ್ತಿದ್ದೆವು.. ನಮ್ಮನ್ನು ಕಂಡಾಗ ತುಳುವಿನಲ್ಲಿ ಶಾಲೆಗೆ ಪೋಪುಜರಾ ಜೋಕ್ಲೆ ಇಲ್ಲಗ್ ಪೋಜರಾ ಜೋಕ್ಲೆ ಕೇಳಿದ ಮಾತು ನೆನಪಾಗುತ್ತಿದೆ. ನೋಡು ನೋಡುತ್ತಲೇ ಹಸಿರಾಗುವ ಗದ್ದೆಗಳನ್ನು ಕಂಡು ಏನೇನೋ ಆಶ್ಚರ್ಯ ಪಡುತ್ತಿದ್ದೆವು. ಅದು ಇದು ಎಂದು ಒಂದು ಕೊಡೆಯೊಳಗೆ ಮೂರು ನಾಲ್ಕು ಮಂದಿ ಸೇರಿ ನಮ್ಮೊಳಗೆಯೇ ಅಭಿಪ್ರಾಯ ಚರ್ಚೆಗಳು ಜೋರು ಜೋರಾಗಿಯೇ ನಡೆಯುತ್ತಿತ್ತು. ಇವೆಲ್ಲವನ್ನೂ ನೆನಪಿಸಿಕೊಂಡರೆ ಈಗಲೂ ಕಣ್ಣು ಹಸಿರಾಗುತ್ತಲೇ ಹೋಗುತ್ತಿದೆ. ಮಲೆನಾಡ ಕವಿ ಕುವೆಂಪು “ಹಸಿರು’ ‘ಕವನದಲ್ಲಿ ಚಿತ್ರಿಸಿದಂತೆ “ಹಸುರತ್ತಲ್ ಹಸುರಿತ್ತಲ್ ಹಸುರೆತ್ತಲ್’ ಎಂಬಂತೆ ಕಂಡ ಆ ಬಾಲ್ಯ ಕಳೆದು ಹೋಗಿದೆ.
ಅದರೆ ಇಂದು
ಅಂದಿನ ಸಂಭ್ರಮವು ಇಂದು ಎಲ್ಲೆಲ್ಲೂ ಮರೆಯಾಗುತ್ತಲೇ ಹೋಗುತ್ತಿದೆಯಲ್ಲ.ಈ ಸ್ಥಿತ್ಯಂತರವೆಲ್ಲವೂ ಇಂದಿನ ಆಧುನಿಕ ಜಗತ್ತಿನೊಂದಿಗೆ ತೆರೆದುಕೊಳ್ಳುವ ಭರಾಟೆಯಲ್ಲಿ ಎಂದೆನಿಸುತ್ತಿದೆ, ಹಾಗಾಗಿ ಹೀಗೆಲ್ಲ ಇತ್ತು ಅಂದಿನ ಬಾಲ್ಯದಲ್ಲಿ ಮಳೆಯ ಜೊತೆ ನಮ್ಮ ಬದುಕಿನ ಗೌಜಿ. ಇದು ನನ್ನೂರಿನ ಕಥೆಯೂ ಹೌದು ನಿಮ್ಮೂರಿನ ಕಥೆಯೂ ಆಗಿರಬಹುದು. ಇಷ್ಟೇ ಅಲ್ಲ ಹೇಳ ಹೊರಟರೆ ಇನ್ನೂ ಇವೆ ಇರಲಿ .ಆದರೆ ಪ್ರಸ್ತುತ ದಿನಗಳಲ್ಲಿ ಮಳೆಯ ಅನುಭವವು ಮಳೆಯೇ ಭಾರೀ ಅಪರೂಪವಾಯಿತೇ? ಎನ್ನುವ ಹಾಗೇ ಅನ್ನಿಸಿದರೆ ಬಂದ ಮಳೆಯು ಸಂಭ್ರಮಕ್ಕಿಂತಲೂ ಭಯ, ಆತಂಕ ,ಅಪಾರ ಹಾನಿ, ಸಾವು ನೋವುಗಳಲ್ಲೇ ಕಳೆದು ಹೋಯಿತಲ್ಲವೇ ? ಎಂದು ಮಾತಾನಾಡಿದ್ದು ಇದೆ… ಯಾಕೆ ಹೀಗೆ ಇದಕ್ಕೆಲ್ಲ ಮಾನವನ ಪ್ರಕೃತಿಯೊಂದಿಗಿನ ಹಸ್ತಕ್ಷೇಪದ ಕಾರಣವಿರಬಹುದೇ ? ನೈಸರ್ಗಿಕವಾದ ಏರುಪೇರಾಗಿಹುದೇ? ಯಾವುದು ಸತ್ಯ ? ಯಾವುದು ಮಿಥ್ಯ ? ಭಗವಂತನೇ ಬಲ್ಲ.. ಅಂತೂ ಸಾಗಿ ಬಂದ ಬದುಕಿನ ಪಯಣದ ದಾರಿಯ ಹೆಜ್ಜೆಗಳನ್ನು ತಿರುಗಿ ನೋಡಿದರೆ ಅವೆಲ್ಲವೂ ಭಾವಾನಾತ್ಮಕವಾಗಿ ಅಚ್ಚಳಿಯದೇ ಹಾಗೆಯೇ ಉಳಿದಿದೆ. ಮುತ್ತಿಟ್ಟ , ಎತ್ತಿ ಆಡಿಸಿದ ,ತಿಂಡಿ ತಂದುಕೊಟ್ಟ ತಪ್ಪು ಗಳನ್ನು ತಿದ್ದಿದ ಮುಂದೆ ಓದಿ ಕೆಲಸ ಸಿಕ್ಕಿ ದ ಮೇಲೆ ನಮಗೆಲ್ಲ ನೀನೇ ತಂದುಕೊಡಬೇಕು ಎಂದು ಹರಸಿದ ಕೆಲವು ಹಿರಿಯ ಜೀವಗಳು ಇಂದಿಲ್ಲ ಅವರ ಆದರ್ಶ ಗಳನ್ನೆಲ್ಲಾ ಆಶೀರ್ವಾದವೆಂದೇ ಭಾವಿಸಿ ಸಾಗುತ್ತಿದ್ದೇನೆ.ಅಂತೂ ಮಳೆಯಲಿ ಜೊತೆಯಲಿ ಬಾಲ್ಯದ ನೆನಪಿನಲಿ ಎಲ್ಲವೂ ಹಸಿರಾಗಿಯೇ ಇದೆ.
ಗಣೇಶ್ ಜಾಲ್ಸೂರು
ganeshshreevikas@gmail.com