ತಪ್ಪಿದ ಸಚಿವಸ್ಥಾನ : ಎಂ.ಪಿ.ರೇಣುಕಾಚಾರ್ಯ ಕಣ್ಣೀರು
ಬೆಂಗಳೂರು : ಕಾಡಿಬೇಡಿ ಮಂತ್ರಿಯಾಗುವ ಅವಶ್ಯಕತೆ ನನಗಿಲ್ಲ. ಲಾಬಿ ಮಾಡಿಲ್ಲ, ಲಾಬಿ ಮಾಡಿದ್ರೆ ನಾನೂ ಇಂದು ಮಂತ್ರಿಯಾಗುತ್ತಿದ್ದೆ ಎಂದು ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.
ಇಂದು ರಾಜ್ಯ ಸಚಿವ ಸಂಪುಟ ರಚನೆಯಾಗಿದ್ದು, ರೇಣುಕಾಚಾರ್ಯ ಅವರಿಗೆ ಈ ಬಾರಿಯೂ ಸಚಿವ ಸ್ಥಾನ ಕೈ ತಪ್ಪಿದೆ. ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಗದ್ಗದಿತರಾಗಿದ್ದಾರೆ.
ಕಾಡಿಬೇಡಿ ಮಂತ್ರಿಯಾಗುವ ಅವಶ್ಯಕತೆ ನನಗಿಲ್ಲ. ಲಾಬಿ ಮಾಡಿಲ್ಲ, ಲಾಬಿ ಮಾಡಿದ್ರೆ ನಾನೂ ಇಂದು ಮಂತ್ರಿಯಾಗುತ್ತಿದ್ದೆ. ಯಾರು ಸಮರ್ಥರಿದ್ದಾರೆ ಅವರಿಗೆ ಕೊಟ್ಟಿರಬಹುದು.
ಹೀಗಾಗಿ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲ್ಲ. ಒಟ್ಟಾರೆಯಾಗಿ ಮುಖ್ಯಮಂತ್ರಿಗಳು ಹಾಗೂ ನೂತನ ಸಚಿವರಿಗೆ ಒಳ್ಳೆಯದಾಗಲಿ ಎನ್ನುತ್ತಾ ಭಾವುಕರಾಗಿದ್ದಾರೆ.
ಈ ಹಿಂದೆ ನಾಯಕತ್ವ ಬದಲಾವಣೆಯಾಗಬಾರದು ಎಂದು ಸಹಿ ಸಂಗ್ರಹಿಸಿದ ಬಗ್ಗೆ ಮಾತನಾಡಿದ ರೇಣುಕಾಚಾರ್ಯ, ಇದು ಈಗಾಗಲೇ ಮುಗಿದ ಅಧ್ಯಾಯ.
ಹಳೆಯ ಕಥೆಯನ್ನು ಮತ್ತೆ ನೆನಪು ಮಾಡಿಕೊಳ್ಳುವುದು ಬೇಡ. ಕಥೆ ಕಥೆಯಾಗಿಯೇ ಉಳಿಯಲಿ. ನಾನು ಈವಾಗ ಏನು ಮಾತಾಡಿದ್ರೂ, ರೇಣುಕಾಚಾರ್ಯಗೆ ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಅಸಮಾಧಾನದಿಂದ ಮಾತಾಡಿದ್ದಾರೆ ಎಂದು ಆಗುತ್ತದೆ. ಹಾಗಾಗಿ ಅದರ ಬಗ್ಗೆ ನಾನು ಮಾತನಾಡುವುದಕ್ಕೆ ಇಚ್ಛೆ ಪಡಲ್ಲ ಎಂದರು.