ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಜೈಲಿನಲ್ಲಿದ್ದಾರೆ. ತನಿಖೆ ಮುಗಿಸಿರುವ ಪೊಲೀಸರು ಈಗಾಗಲೇ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಆರೋಪಿಗಳ ವಿರುದ್ಧ 3991 ಪುಟಗಳ ವಿವರವಾದ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ. ಆದರೆ, ಹೈಕೋರ್ಟ್ ಆರೋಪ ಪಟ್ಟಿಯಲ್ಲಿನ ಯಾವುದೇ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಿದೆ.
ಆರೋಪ ಪಟ್ಟಿ ಸಲ್ಲಿಕೆಯಾದ ದಿನದಿಂದಲೂ ಅದರಲ್ಲಿದ್ದ ಅಂಶಗಳು ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ವರದಿ ಆಗುತ್ತಲೇ ಇವೆ. ದರ್ಶನ್, ಪವಿತ್ರಾ ಹಾಗೂ ರೇಣುಕಾ ಸ್ವಾಮಿಯ ಕೆಲವು ಫೋಟೊಗಳು ಸಹ ಹರಿದಾಡುತ್ತಿವೆ.
ಹೀಗಾಗಿ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕೆಂದು ಆರೋಪಿ ದರ್ಶನ್ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಆರೋಪ ಪಟ್ಟಿಯ ಯಾವುದೇ ಮಾಹಿತಿಯನ್ನು ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ಸೂಚಿಸಿದೆ.
ಆರೋಪ ಪಟ್ಟಿಯ ಮಾಹಿತಿಯನ್ನು ಪ್ರಸಾರ ಮಾಡದಂತೆ ಅಥವಾ ಪ್ರಿಂಟ್ ಮಾಡದಂತೆ ಹೈಕೋರ್ಟ್ ಮಾಧ್ಯಮ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಆಗಸ್ಟ್ 27 ರಂದು ದರ್ಶನ್ ಪತ್ನಿ ವಿಜಯಲಕ್ಷ್ಮಿ, ದರ್ಶನ್ ಅವರಿಗೆ ಸಂಬಂಧಿಸಿದ ಖಾಸಗಿ ಚಿತ್ರಗಳನ್ನು ಮಾಧ್ಯಮಗಳಲ್ಲಿ ಪ್ರದರ್ಶಿಸದಂತೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿ ಪ್ರತಿಬಂಧಕಾಜ್ಞೆ ತಂದಿದ್ದರು.
ಈಗ ಅದೇ ಅರ್ಜಿಯನ್ನು ಉಲ್ಲೇಖಿಸಿ, ಆರೋಪ ಪಟ್ಟಿಯಲ್ಲಿರುವ ಮಾಹಿತಿ ಹಾಗೂ ಹರಿದಾಡುತ್ತಿರುವ ಕೆಲವು ಚಿತ್ರಗಳನ್ನು ಪ್ರದರ್ಶಿಸದಂತೆ ಸೂಚನೆ ನೀಡುವಂತೆ ಮನವಿ ಮಾಡಲಾಗಿತ್ತು. ಹೈಕೋರ್ಟ್ ಏಕಸದಸ್ಯ ಪೀಠವು ಮುಂದಿನ ವಿಚಾರಣೆ ವರೆಗೂ ಆರೋಪ ಪಟ್ಟಿಯಲ್ಲಿರುವ ಮಾಹಿತಿಯನ್ನು ಪ್ರಸಾರ ಮಾಡದಂತೆ ಸೂಚಿಸಿದೆ.