ಆರ್ಥಿಕ ಸಂಕಷ್ಟ : ಬಜೆಟ್ ನ 55 ಘೋಷಣೆಗಳನ್ನ ಕೈ ಬಿಟ್ಟ ಸರ್ಕಾರ
ಬೆಂಗಳೂರು : ಜಿಎಸ್ ಟಿ ಪಾಲು ಬರದೇ ಇರುವುದು. ಕೊರೊನಾ ಕಂಟಕ ದಿನದಿಂದ ರಾಜ್ಯದ ಆರ್ಥಿಕತೆ ಪಾತಾಳಕ್ಕೆ ಕುಸಿದು ಬಿದ್ದಿದೆ. ಇದರಿಂದ ಇಲಾಖೆಗಳಿಗೆ ಅನುದಾನ ನೀಡಲು ಹಣ ಕೊರತೆ ಇರುವುದು ಕೂಡ ಎಲ್ಲರಿಗೂ ಗೊತ್ತಿರುವ ವಿಚಾರವೇ. ಆದ್ರೆ ಈ ಮಧ್ಯೆ ಆರ್ಥಿಕ ಸಂಕಷ್ಟದ ಕಾರಣ ನೀಡಿ 2020-21ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದ್ದ ಹಲವು ಯೋಜನೆಗಳನ್ನ ಸರ್ಕಾರ ಕೈಬಿಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು 2020-21 ನೇ ಸಾಲಿನ ಬಜೆಟ್ ನಲ್ಲಿ ಒಟ್ಟು 286 ಘೋಷಣೆಗಳನ್ನು ಮಾಡಿದ್ದರು. ಇವುಗಳ ಪೈಕಿ 55 ಘೋಷಣೆಗಳನ್ನು ಕೈ ಬಿಡಲಾಗಿದೆ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಅಂಕಿಅಂಶ ನೀಡಿದೆ.
ಹಾಗಾದ್ರೆ ಆ ಯೋಜನೆಗಳು ಯಾವುವು ಇಲಾಖಾವಾರು ವರದಿ ಇಲ್ಲಿದೆ.
ಬೆಂಗಳೂರಲ್ಲಿ ಸಂಚಾರಕ್ಕೆ ಅನುಕೂಲ ಕಲ್ಪಿಸಲು ಬಿಎಂಟಿಸಿ 1500 ಡೀಸೆಲ್ ಬಸ್ ಗಳನ್ನು 600 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವುದಾಗಿ ಘೋಷಿಸಲಾಗಿತ್ತು. ಇದಕ್ಕಾಗಿ ಸರ್ಕಾರ ಏಳು ವರ್ಷಗಳ ಅವಧಿಗೆ 100 ಕೋಟಿ ರೂ. ನಂತೆ ಬಿಎಂಟಿಸಿಗೆ ಸಾಲದ ಸಹಾಯಧನ ನೀಡಲು ಮುಂದಾಗಿತ್ತು. ಅದನ್ನು ಕೈಬಿಡಲಾಗಿದೆ.
ಬಿಎಂಟಿಸಿ 500 ಸಾಮಾನ್ಯ ಇಲೆಕ್ಟ್ರಿಕ್ ಬಸ್ ಗಳನ್ನು ಖರೀದಿಸಲು 100 ಕೋಟಿ ರೂ. ಅನುದಾನ ನೀಡುವ ಘೋಷಣೆಯನ್ನು ಕೈಬಿಡಲಾಗಿದೆ.
ಸಾರ್ವಜನಿಕ ಸಾರಿಗೆ ಸೇವೆಯನ್ನು ಒದಗಿಸಲು ಸಾರಿಗೆ ನಿಗಮಗಳಿಂದ 2450 ಹೊಸ ಬಸ್ ಖರೀದಿಸುವ ಘೋಷಣೆಯನ್ನು ಕೈ ಬಿಡಲಾಗಿದೆ.
ಮಂತ್ರಾಲಯ, ವಾರಣಾಸಿ, ಉಜ್ಜಯಿನಿ, ತುಳಜಾಪುರ, ಪಂಢರಾಪುರ,ಶ್ರೀಶೈಲ ದೇವಾಲಯಗಳ ಅತಿಥಿ ಗೃಹಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ ಬಜೆಟ್ ನಲ್ಲಿ 25 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿತ್ತು. ಇದನ್ನ ಕೈ ಬಿಡಲಾಗಿದೆ.
20 ಕೋಟಿ ರೂ. ಅನುದಾನದ ಜೀವನ ಚೈತ್ರ ಯಾತ್ರೆ ಯೋಜನೆಯನ್ನ ಕಳೆದ ಬಜೆಟ್ ನಲ್ಲಿ ಘೋಷಿಸಲಾಗಿತ್ತು. ಇದನ್ನೂ ಕೂಡ ಕೈಬಿಡಲಾಗಿದೆ.
ಒಂದು ಲಕ್ಷ ಮಹಿಳಾ ಕಾರ್ಮಿಕರಿಗೆ 25 ಕೋಟಿ ರೂ. ಅನುದಾನಿತ ವನಿತಾ ಸಂಗಾತಿ ಯೋಜನೆಯಡಿ ಮಾಸಿಕ ಬಸ್ ಪಾಸ್ ನೀಡುವ ಯೋಜನೆಯನ್ನ ಕೈಬಿಡಲಾಗಿದೆ.
ಬೆಂಗಳೂರಲ್ಲಿ ಸ್ಮಾರ್ಟ್ ಮ್ಯಾನುಫ್ಯಾಕ್ಟ್ರ್ ಸಂಸ್ಥೆ ಸ್ಥಾಪನೆ, ಹಾವೇರಿ ಮತ್ತು ಉಡುಪಿ ಜಿಲ್ಲೆಯಲ್ಲಿ ನೂತನ ಜವಳಿ ಪಾರ್ಕ್ ಯೋಜನೆ ಆರ್ಥಿಕ ಸಂಕಷ್ಟಕ್ಕೆ ಬಲಿಯಾಗಿವೆ.
20 ಕೋಟಿ ರೂ. ವೆಚ್ಚದ ಕೃಷಿ ನಾವಿನ್ಯತಾ ಕೇಂದ್ರ ಸ್ಥಾಪನೆ ಮತ್ತು ಸಂಚಾರಿ ಡಿಜಿಟಲ್ ತಾರಾಲಯವನ್ನು 5 ಕೋಟಿ ರೂ. ವೆಚ್ಚದಲ್ಲಿ ಐದು ಇತರ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆಯನ್ನ ಕೈಬಿಡಲಾಗಿದೆ.
1000 ಮಹಿಳಾ ಮೀನುಗಾರರಿಗೆ 5 ಕೋಟಿ ರೂ. ಅನುದಾನದಲ್ಲಿ ದ್ವಿಚಕ್ರ ವಾಹನ ವಿತರಣೆ ಯೋಜನೆ. ಹಂಗಾರಕಟ್ಟೆ ಬಂದರನ್ನು 130 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆಯನ್ನ ಕೂಡ ಸರ್ಕಾರ ಕೈಬಿಟ್ಟಿದೆ. ಇದಲ್ಲದೆ 28 ಕೋಟಿ ರೂ. ಅನುದಾನದ ಆರು ವರ್ಷದೊಳಗಿನ ಶ್ರವಣ ದೋಷ ಮುಕ್ತ ಯೋಜನೆಯನ್ನ ಕೈಬಿಟ್ಟಿದೆ.
ಇವು ಸರ್ಕಾರ ಕೈಬಿಟ್ಟಿರುವ ಪ್ರಮುಖ ಯೋಜನೆಗಳ ವರದಿಯಾಗಿದೆ.