ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಸಿಎಂಗೆ ವಿನಂತಿ ಮಾಡುವೆ : ಬಿಎಸ್ ವೈ
ಬೆಂಗಳೂರು: ಭಗವದ್ಗೀತೆಯನ್ನು ಪಠ್ಯಪುಸ್ತಕದಲ್ಲಿ ಸೇರಿಸಲು ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡುವೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ನೆಲಮಂಗಲದ ಅವೇರಹಳ್ಳಿಯಲ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಿಕ್ಕ ವಯಸ್ಸಿನಲ್ಲೇ ಭಗವದ್ಗೀತೆಯಲ್ಲಿ ಬರುವ ಎಲ್ಲಾ ವಿಚಾರವನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹೀಗಾಗಿ ಗುಜರಾತ್ ರಾಜ್ಯದಲ್ಲಿ ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಲು ಜಾರಿಗೆ ತಂದಿದ್ದಾರೆ. ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಅವರ ಜೊತೆ ತೀರ್ಮಾನ ಮಾಡಿ ಕರ್ನಾಟಕದಲ್ಲೂ ಭಗವದ್ಗೀತೆಯನ್ನು ಪಠ್ಯ ಪುಸ್ತಕ ಸೇರಿಸಲು ವಿನಂತಿ ಮಾಡುವೆ ಎಂದು ಹೇಳಿದರು.
ಭಗವದ್ಗೀತೆ ಧರ್ಮ, ಸಂಸ್ಕೃತಿ, ಪರಂಪರೆ, ಆಚಾರ-ವಿಚಾರ ತಿಳಿಸುತ್ತೆ. ಇದರ ಬಗ್ಗೆ ಟೀಕೆ- ಟಿಪ್ಪಣಿ ಮಾಡಿದರೆ ಹೇಗೆ. ಅನೇಕ ಕಾಂಗ್ರೆಸ್ ಮುಖಂಡರು ಸ್ವಾಗತ ಮಾಡಿದ್ದಾರೆ. ವಿರೋಧ ಮಾಡುವವರಿಗೆ ದಯಮಾಡಿ ಒಳ್ಳೆಯ ಕೆಲಸಕ್ಕೆ ಅವಕಾಶ ಮಾಡಿ ಎಂದು ವಿನಂತಿ ಮಾಡಿಕೊಂಡರು.
ಇನ್ನೂ ಅಧಿವೇಶನ ಮುಗಿದ ನಂತರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡುತ್ತೇನೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 160 ಕ್ಷೇತ್ರ ಗೆಲ್ಲಲು ಕಾರ್ಯಕ್ರಮ ರೂಪಿಸಲಾಗಿದೆ. ಸಂಪುಟ ಪುನರ್ ರಚನೆ ವಿಚಾರ ಮುಖ್ಯಮಂತ್ರಿಗೆ ಬಿಟ್ಟಿದ್ದು, ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದು ತಿಳಿಸಿದರು.








