ಫ್ಲೋರಿಡಾ: ಅಮೆರಿಕಾದ ಮನರಂಜನಾ ಮಾಧ್ಯಮ ಸಂಸ್ಥೆ ವರ್ಲ್ಡ್ ರೆಸ್ಲಿಂಗ್ ಎಂಟರ್ ಟೈನ್ಮೆಂಟ್ (ಡಬ್ಲ್ಯುಡಬ್ಲ್ಯುಇ) ತನ್ನ ಕುಸ್ತಿ ಪಂದ್ಯಗಳ ಪ್ರಸಾರವನ್ನು ಮರು ಆರಂಭಿಸಿದೆ. ಫ್ಲೋರಿಡಾ ಅಧಿಕಾರಿಗಳಿಂದ ತಮ್ಮ ಕಾರ್ಯಕ್ರಮಗಳಿಗೆ “ಅಗತ್ಯ ಸೇವೆಗಳ” ಸ್ಥಾನಮಾನವನ್ನು ಸಂಸ್ಥೆ ಗಿಟ್ಟಿಸಿಕೊಂಡಿದೆ.
ಕೊರೊನಾ ವೈರಸ್ ಹಾವಳಿಯಿಂದಾಗಿ ವಿಶ್ವದಾದ್ಯಂತ ಕ್ರೀಡೆ ಮತ್ತು ಇತರ ಮನರಂಜನಾ ಕಾರ್ಯಕ್ರಮಗಳನ್ನು ಬಂದ್ ಮಾಡಲಾಗಿದೆ. ಆದ್ರೆ ಆಸ್ಪತ್ರೆಗಳು, ಅಗ್ನಿ ಶಾಮಕ ದಳ, ದಿನಸಿ ಪೂರೈಕೆದಾರರು ಹಾಗೂ ಮಾನಸಿಕ ಆರೋಗ್ಯ ಸೇವಾ ಕಾರ್ಯಕರ್ತರ ಸೇವೆಗಳಂತೆ ‘ಡಬ್ಲ್ಯುಡಬ್ಲ್ಯುಇ’ ಕೂಡ ಅಗತ್ಯ ಸೇವೆಗಳನ್ನು ಒದಗಿಸುತ್ತಿದೆ ಎಂದು ಫ್ಲೋರಿಡಾದ ತುರ್ತುಪರಿಸ್ಥಿತಿ ನಿರ್ವಹಣಾ ನಿರ್ದೇಶಕರು ದೃಢಪಡಿಸಿದ್ದಾರೆ.
ಸೋಮವಾರ ಅದು ತನ್ನ ಸಾಪ್ತಾಹಿಕ ಸರಣಿ ‘ರಾ’ ಇದರ ನೇರ ಪ್ರಸಾರವನ್ನು ತನ್ನ ಒರ್ಲಾಂಡೋ ಪ್ರೊಡಕ್ಷನ್ ಸಂಸ್ಥೆ ಆವರಣದಿಂದ ಮಾಡಿದೆ.
“ಸಮಾಜದ ಅವಿಭಾಜ್ಯ ಅಂಗವಾಗಿರುವ ಬ್ರ್ಯಾಂಡ್ ಆಗಿ, ತನ್ನ ಸೂಪರ್ ಸ್ಟಾರ್ ಗಳ ಮೂಲಕ ಕುಟುಂಬಗಳನ್ನು ಒಂದುಗೂಡಿಸುವ ಹಾಗೂ ಜನರಲ್ಲಿ ಆಶಾಭಾವನೆ ಮತ್ತು ದೃಢ ಮನೋಭಾವನೆಯನ್ನು ಬೆಳೆಸುವ ಕೆಲಸವನ್ನು ಡಬ್ಲ್ಯುಡಬ್ಲ್ಯುಇ ಮಾಡುತ್ತಿದೆ,” ಎಂದು ಸಂಸ್ಥೆಯ ಹೇಳಿಕೆ ತಿಳಿಸಿದೆ.








