ಕಾಶ್ಮೀರ ಕಣಿವೆಯ ಹಿಮಪಾತದಲ್ಲಿ ಸಿಲುಕಿದ್ದ 230 ಜನರ ರಕ್ಷಣೆ…
ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾದಲ್ಲಿ ಹಿಮಪಾತದಿಂದಾಗಿ ಗುರೇಜ್ ಕಣಿವೆಯಲ್ಲಿ ಸಿಲುಕಿದ್ದ 230 ಪ್ರಯಾಣಿಕರನ್ನು ಭಾರತೀಯ ಸೇನೆಯು ಹೆಲಿಕಾಪ್ಟರ್ ಮೂಲಕ ಕರೆತಂದಿದೆ. ಸ್ಥಳೀಯ ತಂಡದ ನೆರವಿನೊಂದಿಗೆ ಸೇನೆ ಗಂಟೆಗಳ ಕಾರ್ಯಾಚರಣೆಯ ನಂತರ ಎಲ್ಲರನ್ನೂ ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಕಣಿವೆಯಲ್ಲಿ ಸಿಲುಕಿದ್ದವರಲ್ಲಿ 84 ಜೆಕೆಎಸ್‌ಎಸ್‌ಬಿ ಸ್ಪರ್ಧಿಗಳು, 103 ಹಿರಿಯ ನಾಗರಿಕರು, 13 ಮಕ್ಕಳು ಸೇರಿದ್ದಾರೆ. ಕಾರ್ಯಾಚರಣೆಗಾಗಿ ಎಂಐ-17 ಮತ್ತು ಆರ್ಯನ್ ಖಾಸಗಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿತ್ತು. ಎಲ್ಲಾ 230 ಜನರನ್ನು 17 ಹೆಲಿಕಾಪ್ಟರ್ ಗಳಲ್ಲಿ ರಕ್ಷಿಸಲಾಗಿದೆ.
ಹಿಮಪಾತದ ನಂತರ ರಸ್ತೆಯನ್ನು ಮುಚ್ಚಿದ್ದರಿಂದ ಈ ಜನರು ಗುರೆಜ್ ಕಣಿವೆಯ ವಿವಿಧ ಪ್ರದೇಶಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಗುರೇಜ್ ಕಣಿವೆಯ ದಾವರ್, ಕಂಜಲ್ವಾನ್, ನೀರು ಮತ್ತು ಬದುವಾಬ್ ಪ್ರದೇಶಗಳಲ್ಲಿ 114 ಜನರನ್ನು ಏರ್ ಲಿಫ್ಟ್ ಮೂಲಕ ಬಂಡಿಪೋರಾಕ್ಕೆ ಕರೆತರಲಾಯಿತು. ಅದೇ ಸಮಯದಲ್ಲಿ, 103 ಹಿರಿಯ ನಾಗರಿಕರು ಮತ್ತು 13 ಮಕ್ಕಳನ್ನು ಇತರ ಪ್ರದೇಶಗಳಿಂದ ವಿಮಾನದಲ್ಲಿ ತರಲಾಯಿತು.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಈ ವಿಷಯದ ಬಗ್ಗೆ ಅಪ್‌ಡೇಟ್ ತೆಗೆದುಕೊಳ್ಳುತ್ತಿದ್ದಾರೆ. ಎಲ್ಲಾ ಪ್ರಯಾಣಿಕರಿಗೆ, ವಿಶೇಷವಾಗಿ ಜೆಕೆಎಸ್‌ಎಸ್‌ಬಿ ಪರೀಕ್ಷೆಗೆ ಹೋಗುವ ವಿದ್ಯಾರ್ಥಿಗಳಿಗೆ, ಹಿಮದಿಂದ ಬೇಗನೆ ಹೊರತರುವಂತೆ ಅವರು ಸೂಚನೆ ನೀಡಿದ್ದಾರೆ.
ಅವರನ್ನು ಹೊರತರಲು ವಿಳಂಬವಾದರೆ, ವಿದ್ಯಾರ್ಥಿಗಳ ಪೇಪರ್ ತಪ್ಪಿಹೋಗುತ್ತದೆ ಅವರ ಬದುಕಿನೊಂದಿಗೆ ನಾವು ಆಟವಾಡಲು ಸಾಧ್ಯವಿಲ್ಲ ಎಂದು ಲೆಫ್ಟಿನೆಂಟ್ ಗವರ್ನರ್ ಹೇಳಿದರು.
ವಿದ್ಯಾರ್ಥಿಗಳನ್ನು ಏರ್ ಲಿಫ್ಟ್ ಮಾಡಿರುವ ಬಗ್ಗೆ ಮಾಹಿತಿ ಪಡೆದ ಮನೋಜ್ ಸಿನ್ಹಾ ಪ್ರತಿಕ್ರಿಯಿಸಿದ್ದಾರೆ. ವಿದ್ಯಾರ್ಥಿಗಳು ಸಂಕಷ್ಟದಿಂದ ಹೊರಬಂದಿರುವುದೇ ದೊಡ್ಡ ಸಂಗತಿ ಎಂದರು. ಏರ್ ಲಿಫ್ಟಿಂಗ್ ಮೂಲಕ ವಿದ್ಯಾರ್ಥಿಗಳ ವೃತ್ತಿ ಬದುಕಿಗೆ ಸೇನೆ ಭದ್ರತೆ ಒದಗಿಸಿದ್ದು, ಹೊಸ ಭರವಸೆ ಮೂಡಿಸಿದೆ ಎಂದರು..








