ಬೆಂಗಳೂರು: ಖಾಸಗಿ ಸಂಸ್ಥೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಕಡ್ಡಾಯಗೊಳಿಸುವ ಮಸೂದೆಗೆ ಉದ್ಯಮಿಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಈ ಕುರಿತು ಚರ್ಚಿಸುವುದಾಗಿ ಹೇಳಿದೆ.
ಈ ಕುರಿತು ಸ್ಪಷ್ಟನೆ ಮಾಡಿರುವ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದು, ಮಸೂದೆಯ ಷರತ್ತುಗಳ ಬಗ್ಗೆ ಉದ್ಯಮ ತಜ್ಞರು ಮತ್ತು ಇತರ ಇಲಾಖೆಗಳ ಹತ್ತಿರ ಸಮಾಲೋಚನೆ ನಡೆಸಿ ಆನಂತರವೇ ಜಾರಿಗೊಳಿಸುವಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಯಾರೂ ಭಯಪಡುವ ಅಗತ್ಯವಿಲ್ಲ. ನಾವು ಸುದೀರ್ಘ ಸಮಾಲೋಚನೆಗಳನ್ನು ನಡೆಸುತ್ತೇವೆ ಮತ್ತು ಒಮ್ಮತಕ್ಕೆ ಬರಲಿದ್ದೇವೆ. ಸ್ಥಳೀಯ ನಿವಾಸಿಗಳಿಗೆ ಉದ್ಯೋಗಗಳನ್ನು ಒದಗಿಸುವುದು ಹಾಗೂ ಹೂಡಿಕೆ ಆಕರ್ಷಿಸುವುದು ನಮ್ಮ ಕರ್ತವ್ಯ ಎಂದು ಹೇಳಿದ್ದಾರೆ.
ಉದ್ಯಮದ ದಿಗ್ಗಜರಾದ ಕಿರಣ್ ಮಜುಂದಾರ್ ಶಾ ಮತ್ತು ಮೋಹನ್ ದಾಸ್ ಪೈ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ನಂತರ ಸರ್ಕಾರ ಈ ಕುರಿತು ಚಿಂತನೆ ನಡೆಸಿದೆ.