ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮೀಸಲಾತಿ ವಿಚಾರ : ಪಕ್ಷಬೇಧ ಮರೆತು ಧರಣಿ
ಬೆಂಗಳೂರು : ವಿಧಾನಸಭೆಯಲ್ಲಿ ಇಂದು ಪಂಚಮಸಾಲಿ ಸಮುದಾಯಕ್ಕೆ 2ಎ ಹಾಗೂ ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ಕಲ್ಪಿಸಬೇಕು ಎಂಬ ವಿಚಾರ ಪ್ರತಿಧ್ವನಿಸಿತು. ವಿಧಾನಸಭಾ ಸದಸ್ಯರು ಪಕ್ಷ ಬೇಧ ಮರೆತು ಸದನದ ಬಾವಿಗಿಳಿದು ಕೆಲ ಕಾಲ ಧರಣಿ ನಡೆಸಿದ್ರು.
ಸದನದಲ್ಲಿ ಮೀಸಲಾತಿ ವಿಷಯ ಪ್ರಸ್ತಾಪಿಸಿದ ಬಸವನಗೌಡ ಪಾಟೀಲ್ ಯತ್ನಾಳ್, ರಾಜ್ಯದಲ್ಲಿ 80 ಲಕ್ಷದಷ್ಟು ಪಂಚಮಸಾಲಿ ಜನಸಂಖ್ಯೆ ಇದೆ. ಈ ಸಮುದಾಯ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ರು.
ಅಲ್ಲದೆ ಮೀಸಲಾತಿಗಾಗಿ ಒತ್ತಾಯಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಕೂಡಲ ಸಂಗಮದಿಂದ 400 ಕಿ.ಮೀ ಪಾದ ಯಾತ್ರೆ ನಡೆಸುತ್ತಿದ್ದು, ಆರ್ಥಿಕ ಹಾಗೂ ಶೈಕ್ಷಣಿಕ ಮೀಸಲಾತಿ ಯನ್ನು ಕಲ್ಪಿಸಬೇಕು.
ಇನ್ನು ಈ ಹಿಂದೆ ಸಿಎಂ ಬಿಎಸ್ ವೈ ಈ 2ಎ ಮೀಸಲಾತಿ ಕಲ್ಪಿಸುವುದಾಗಿ ಭರವಸೆ ನೀಡಿದ್ದರೂ, ಆದ್ರೆ ಈವರೆಗೂ ಸೇರ್ಪಡೆ ಮಾಡುವ ಕೆಲಸವಾಗಿಲ್ಲ ಎಂದ ಅಸಮಾಧಾನ ಹೊರಹಾಕಿದರು.
ಇನ್ನು ಕುರುಬ ಸಮುದಾಯ ದವರು ಎಸ್ಟಿಗೆ ಸೇರಿಸಬೇಕೆಂದು ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ, ಈಶ್ವರಾನಂದ ಸ್ವಾಮೀಜಿ ನೇತೃತ್ವದಲ್ಲಿ ಕಾಗಿನೆಲೆಯಿಂದಲೂ ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುತ್ತಿದೆ.
ಗಂಗಾಮತಸ್ಥರಿಗೆ ಎಸ್ಟಿ ಪ್ರಮಾಣ ಪತ್ರ ಕೊಡುತ್ತಿಲ್ಲ. ಈ ಸಮುದಾಯಕ್ಕೆ ಯಾವಾಗ ಮೀಸಲಾತಿ ಸೌಲಭ್ಯ ಕಲ್ಪಿಸಲಾಗುತ್ತದೆ ಎಂಬುದನ್ನು ಖಚಿತವಾಗಿ ಹೇಳಬೇಕು, ನಿರ್ಧಿಷ್ಟ ಗಡುವಿನೊಳಗೆ ಮೀಸಲಾತಿ ಸೇರ್ಪಡೆ ಆಗಬೇಕು ಎಂದು ಪಟ್ಟು ಹಿಡಿದರು.
ಇದಕ್ಕೆ ಜೆಡಿಎಸ್ ಸದಸ್ಯ ಬಂಡೆಪ್ಪ ಕಾಂಶಂಪುರ್ ಅವರು ಕೂಡ ಧ್ವನಿಗೂಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಗೃಹ ಸಚಿವ ಬಸವರಾಜ್ ಬೊಮ್ಮಾರಿ, ಈ ವಿಚಾರವನ್ನ ಸರ್ಕಾರ ಪರಿಶೀಲನೆ ಮಾಡಲಿದೆ, ಶೂನ್ಯ ವೇಳೆ ಹೆಚ್ಚಿನ ಚರ್ಚೆಗೆ ಅವಕಾಶವಿಲ್ಲ ಎಂದು ತಿಳಿಸಿದ್ರು.
ಇದಾದ ಬಳಿಕ ಕೆ.ಎಸ್.ಈಶ್ವರಪ್ಪ, ಶ್ರೀರಾಮುಲು ಎಲ್ಲರೂ ಚರ್ಚೆಗೆ ಅವಕಾಶ ಕೊಡಬೇಕಾಗಿ ಒತ್ತಾಯಿಸಿದರು. ಇದಕ್ಕೆ ಒಪ್ಪದ ಕಾರಣ ಸದನ ಬಾವಿಗಿಳಿದು ಧರಣಿ ನಡೆಸಿದ್ರು.
.Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel









