ನಿತ್ಯಾನಂದನ ಕೈಲಾಸದಲ್ಲಿ ಈಗ ‘ರಿಸರ್ವ್ ಬ್ಯಾಂಕ್ ಆಫ್ ಕೈಲಾಶ್’ !
ಹೊಸದಿಲ್ಲಿ, ಅಗಸ್ಟ್ 18: ಆಶ್ರಮ ಆಯಿತು.. ಮಠ ಕಟ್ಟಿ ಆಯಿತು.. ಲಕ್ಷಾಂತರ ಜನರನ್ನು ಮೋಡಿ ಮಾಡಿ ಜೈಲಿಗೆ ಹೋಗುವುದನ್ನು ತಪ್ಪಿಸಲು ದೇಶವನ್ನೇ ಬಿಟ್ಟಿದ್ದು ಆಯಿತು. ಇದೀಗ ಸ್ವಯಂ ಘೋಷಿತ ದೇವ ಮಾನವ ತಾನೇ ಸೃಷ್ಟಿಸಿಕೊಂಡಿರುವ ದೇಶದಲ್ಲಿ ಬ್ಯಾಂಕ್ ಸ್ಥಾಪಿಸಲು ಹೊರಟಿದ್ದಾನೆ.

ಅತ್ಯಾಚಾರ ಸೇರಿದಂತೆ ಹಲವು ಕ್ರಿಮಿನಲ್ ಪ್ರಕರಣಗಳ ಆರೋಪಿ ಸದಾ ವಿವಾದಗಳಿಂದಲೇ ಸುದ್ದಿಯಲ್ಲಿರುವ,
ನಿತ್ಯಾನಂದ ಸ್ವಾಮಿ ತನ್ನ ದೇಶ ‘ಕೈಲಾಶ್’ ನಲ್ಲಿ ರಿಸರ್ವ್ ಬ್ಯಾಂಕ್ ಸ್ಥಾಪಿಸಲು ಹೊರಟಿದ್ದಾನೆ. ಇದಕ್ಕಾಗಿ ನಿತ್ಯಾನಂದ ಅನೇಕ ದೇಶಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಗಣೇಶ ಚತುರ್ಥಿಯ ಸಂದರ್ಭದಲ್ಲಿ ಹಿಂದೂ ರಿಸರ್ವ್ ಬ್ಯಾಂಕ್ ಸ್ಥಾಪಿಸುವುದಾಗಿ ಘೋಷಿಸಿ ಕೊಂಡಿದ್ದಾನೆ.
Self-styled godman & rape accused #Nithyananda, in a video, announces that he's set up a bank called Reserve Bank of Kailasa & the currency will be announced on #GaneshChathurthi. Nithyananda roams free despite being accused of sexual assault & has missed over 50 hearings so far pic.twitter.com/J70G7acag6
— Mirror Now (@MirrorNow) August 17, 2020
ಈ ಬಗ್ಗೆ ವಿಡಿಯೋವನ್ನು ಬಿಡುಗಡೆ ಮಾಡಿ ಹೇಳಿಕೆ ನೀಡಿರುವ ನಿತ್ಯಾನಂದ, ಬ್ಯಾಂಕ್ ಗೆ ಸಂಬಂಧಿಸಿದ ಎಲ್ಲಾ ಕಾನೂನುಗಳನ್ನು ಪೂರ್ಣಗೊಳಿಸಿದ್ದೇನೆ ಎಂದು ಹೇಳಿದ್ದಾನೆ. ತನ್ನ ರಿಸರ್ವ್ ಬ್ಯಾಂಕ್ ಗೆ ರಿಸರ್ವ್ ಬ್ಯಾಂಕ್ ಆಫ್ ಕೈಲಾಶ್ ಎಂದು ನಾಮಕರಣ ಮಾಡಿರುವ ನಿತ್ಯಾನಂದ ತನ್ನ ಭಾವಚಿತ್ರವಿರುವ ನೋಟುಗಳನ್ನು ಸಹ ಮುದ್ರಿಸಿದ್ದು, ಅವುಗಳು ಅಮೆರಿಕನ್ ಡಾಲರ್ ಮಾದರಿಯಲ್ಲಿ ಸಿದ್ದಗೊಂಡಿದೆ

ಭಾರತದಿಂದ ಪರಾರಿಯಾಗಿರುವ ಅತ್ಯಾಚಾರದ ಆರೋಪಿ ನಿತ್ಯಾನಂದನ ಮೇಲೆ ಮಕ್ಕಳ ಮೇಲೆ ಕಿರುಕುಳ ನೀಡಿದ ಆರೋಪ ಕೂಡ ಇದೆ. ಮಾಧ್ಯಮ ವರದಿಗಳ ಪ್ರಕಾರ, ನಿತ್ಯಾನಂದ ದಕ್ಷಿಣ ಅಮೆರಿಕದ ಈಕ್ವೆಡಾರ್‌ನಲ್ಲಿ ಒಂದು ದ್ವೀಪವನ್ನು ಖರೀದಿಸಿದ್ದು, ಅದಕ್ಕೆ ‘ಕೈಲಾಶ್’ ಎಂದು ಹೆಸರಿಸಲಾಗಿದೆ.

ಇದು ನನ್ನದೇ ದೇಶ ಎಂದು ಹೇಳಿಕೊಳ್ಳುತ್ತಿರುವ ನಿತ್ಯಾನಂದ ಈ ದೇಶಕ್ಕಾಗಿ ಧ್ವಜ, ಲಾಂಛನ, ಪ್ರತ್ಯೇಕ ಪಾಸ್ ಪೋರ್ಟ್ ಗಳನ್ನು ಕೂಡ ಸಿದ್ದಪಡಿಸಿಕೊಂಡಿದ್ದಾನೆ ಮತ್ತು ಪ್ರಧಾನಿ ಸೇರಿದಂತೆ ಸಚಿವ ಸಂಪುಟವನ್ನು ರಚಿಸಿಕೊಂಡಿದ್ದಾನೆ.








