ಯುದ್ಧದಲ್ಲಿ ಮೀಸಲು ಪಡೆಯ ಯೋಧರು ಭಾಗವಹಿಸುವುದಿಲ್ಲ : ಪುಟಿನ್ – Saaksha Tv
ರಷ್ಯಾ: ಉಕ್ರೇನ್ ಮೇಲೆ ಮಾಡುತ್ತಿರುವ ಯುದ್ಧದಲ್ಲಿ ಮೀಸಲು ಪಡೆಯ ಯೋಧರು ಭಾಗವಹಿಸುವುದಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಮಾತನಾಡಿದ ಅವರು ರಷ್ಯಾದಲ್ಲಿ ಕಡ್ಡಾಯ ಸೇನಾ ಸೇವೆಗೆ ಹೆಸರು ದಾಖಲಿಸಿಕೊಂಡವರು ಮತ್ತು ಮೀಸಲು ಪಡೆಗಳ ಯೋಧರನ್ನು ಯುದ್ಧಕ್ಕೆ ನಿಯೋಜನೆ ಮಾಡುವುದಿಲ್ಲ. ವೃತ್ತಿಪರ ಯೋಧರು ಮಾತ್ರ ಈ ಯುದ್ಧದಲ್ಲಿ ಭಾಗವಹಿಸುತ್ತಾರೆ. ಅವರು ರಷ್ಯಾದ ಜನರಿಗೆ ಭದ್ರತೆ ಮತ್ತು ಶಾಂತಿ ಒದಗಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಯುದ್ಧದಲ್ಲಿ ಭಾಗವಹಿಸಿರುವ ಸೈನಿಕರು ಮತ್ತು ಅಧಿಕಾರಿಗಳ ತಾಯಂದಿರು, ಪತ್ನಿಯರು, ಸಹೋದರಿಯರು, ಗೆಳತಿಯರನ್ನು ಉದ್ದೇಶಿಸಿ ಮಾತನಾಡಿದ ಪುಟಿನ್ ನೀವು ನಿಮ್ಮ ಪ್ರೀತಿ ಪಾತ್ರರ ಬಗ್ಗೆ ಚಿಂತಿಸುತ್ತಿದ್ದೀರಿ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ನೀವು ಅವರ ಬಗ್ಗೆ ಹೆಮ್ಮೆಪಡಬಹುದು. ಇಡೀ ದೇಶವು ಅವರ ಬಗ್ಗೆ ಹೆಮ್ಮೆಪಡುತ್ತದೆ ಎಂದಿದ್ದಾರೆ.









