ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ರಾಜೀನಾಮೆ
ಶ್ರೀನಗರ, ಅಗಸ್ಟ್ 6: ಜಮ್ಮು-ಕಾಶ್ಮೀರದ 370 ನೇ ವಿಧಿಯನ್ನು ರದ್ದುಪಡಿಸುವುದರ ಜೊತೆಗೆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವುದಾಗಿ ಭಾರತ ಸರ್ಕಾರ ಘೋಷಿಸಿದ ಒಂದು ವರ್ಷದ ನಂತರ, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಗಿರೀಶ್ ಚಂದ್ರ ಮುರ್ಮು ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ಗಿರೀಶ್ ಚಂದ್ರ ಮುರ್ಮು ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ರಾಷ್ಟ್ರಪತಿಗಳ ಕಾರ್ಯದರ್ಶಿ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಮೊದಲು ಜಿಸಿ ಮುರ್ಮು ರಾಜೀನಾಮೆ ನೀಡಿದ್ದಾರೆ ಎಂಬ ವರದಿಗಳು ಬುಧವಾರದಿಂದ ಜಮ್ಮುಕಾಶ್ಮೀರದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ವರದಿಗಳ ಪ್ರಕಾರ, ಜಿಸಿ ಮುರ್ಮು ಮುಂದಿನ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ (ಸಿಎಜಿ) ಆಗಿ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆಯಿದೆ. ಈ ವಾರ ನಿವೃತ್ತಿ ಹೊಂದಲಿರುವ ರಾಜೀವ್ ಮೆಹರಿಷಿ ಅವರ ಸ್ಥಾನದಲ್ಲಿ ಅವರು ಸ್ಥಾನ ಪಡೆಯುವ ನಿರೀಕ್ಷೆಯಿದೆ.
2019 ರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆಯಡಿ ಮುಮ್ಮು 2019 ರ ಅಕ್ಟೋಬರ್ 31 ರಂದು ಜಮ್ಮು ಮತ್ತು ಕಾಶ್ಮೀರದ ಕೇಂದ್ರ ಭೂಪ್ರದೇಶದ ಮೊದಲ ಎಲ್-ಜಿ ಆಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡಿದ್ದರು. ಜಿಸಿ ಮುರ್ಮು 1985 ರ ಬ್ಯಾಚ್‌ನ ಗುಜರಾತ್ ಕೇಡರ್‌ನ ಭಾರತೀಯ ಆಡಳಿತ ಸೇವಾ ಅಧಿಕಾರಿ. ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದರು.