ಕೊಲ್ಕತ್ತಾ, ಮೇ 18 : ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕಿನ ವಿರುದ್ಧ ಭಾರತ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಪಶ್ಚಿಮ ಬಂಗಾಳ ಆಸ್ಪತ್ರೆಯ ಸುಮಾರು 400 ನರ್ಸ್ ಗಳು ಕೆಲಸಕ್ಕೆ ರಾಜೀನಾಮೆ ಕೊಟ್ಟು, ತಮ್ಮ ಊರಿಗೆ ತೆರಳುತ್ತಿದ್ದಾರೆ.
ಕೊಲ್ಕತ್ತಾ ಸೇರಿದಂತೆ ರಾಜ್ಯದ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ನರ್ಸ್ ಗಳು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಈಗಾಗಲೇ 185 ನರ್ಸ್ ಗಳು ಶನಿವಾರ ಮಣಿಪುರಕ್ಕೆ ವಾಪಸಾಗಿದ್ದರೆ, 186 ಮಂದಿ ಒಡಿಶಾ, ಜಾರ್ಖಂಡ್, ಛತ್ತೀಸ್‌ಗಡ ಮತ್ತು ಇತರ ರಾಜ್ಯಗಳತ್ತ ಹೊರಟಿದ್ದಾರೆ ಎಂದು ವರದಿಗಳು ಹೇಳಿವೆ. ನರ್ಸ್ ಗಳ ಸಾಮೂಹಿಕ ರಾಜೀನಾಮೆಗೆ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
ಪಶ್ಚಿಮ ಬಂಗಾಳದಲ್ಲಿ ಕೊರೊನಾ ಸಾವಿನ ಸಂಖ್ಯೆ ಈಗಾಗಲೇ 232ಕ್ಕೆ ಏರಿದ್ದು, ಇಂತಹ ಸಂದರ್ಭದಲ್ಲಿ ನರ್ಸ್ ಗಳ ಮನವೊಲಿಸಿ ರಾಜೀನಾಮೆಯನ್ನು ಹಿಂಪಡೆಯುವಂತೆ ಮತ್ತು ರಾಜೀನಾಮೆಯ ಕಾರಣ ಪತ್ತೆ ಹಚ್ಚುವಂತೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ಹಲವು ಕಡೆಗಳಿಂದ ಒತ್ತಾಯ ಕೇಳಿ ಬರುತ್ತಿದೆ.








