ಹಾಸನ : ‘ಏಯ್ ನೋಡಮ್ಮ ನಾನು ನಿನ್ನನ್ನು ಮಾತನಾಡಿಸುತ್ತಿಲ್ಲ’ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಗೆ ಏಕವಚನ ಪ್ರಯೋಗಿಸಿ ಮಾತನಾಡಿದ ಘಟನೆ ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದಿದೆ.
ಇಂದು ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಸಚಿವ ರೇವಣ್ಣ 15ನೇ ಹಣಕಾಸಿಗೆ ಸಂಬಂಧಪಟ್ಟಂತೆ ಮಾತನಾಡುತ್ತಿದ್ದರು. ಈ ವೇಳೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ದೇವರಾಜ್ ತಮ್ಮ ಮೇಲೆ ಕೇಳಿಬರುತ್ತಿರುವ ಆರೋಪಗಳಿಗೆ ಸಮಜಾಯಿಷಿ ನೀಡಲು ಮುಂದಾದರು. ಇದರಿಂದ ಕೆರಳಿದ ರೇವಣ್ಣ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕುರಿತು, ‘ಏಯ್ ನೋಡಮ್ಮ ನಾನು ನಿನ್ನನ್ನು ಮಾತನಾಡಿಸುತ್ತಿಲ್ಲ’ ಎಂದು ಏಕವಚನ ಪ್ರಯೋಗಿಸಿದರು. ಕೂಡಲೇ ಅಧ್ಯಕ್ಷೆ ಶ್ವೇತಾ ದೇವರಾಜ್, ಮರ್ಯಾದೆ ಕೊಟ್ಟು ಮಾತನಾಡಿಸಿ ಎಂದು ರೇವಣ್ಣ ವಿರುದ್ಧ ತಿರುಗಿ ಬಿದ್ದರು.
ಈ ವೇಳೆ ಮಧ್ಯೆ ಪ್ರವೇಶಿಸಿದ ಭವಾನಿ ರೇವಣ್ಣ ನೀನು ಮರ್ಯಾದೆ ಕೊಟ್ಟಿದ್ದರಲ್ಲವೆ ಅವರು ಕೊಡೋದು ಎಂದು ಪತಿ ಪರ ಬ್ಯಾಟ್ ಬೀಸಿದರು. ಇದೆಲ್ಲವನ್ನು ಗಮನಿಸುತ್ತಿದ್ದ ಎಂಎಲ್ ಸಿ ಗೋಪಾಲಸ್ವಾಮಿ, ತಮ್ಮ ಪಕ್ಷದ ಅಧ್ಯಕ್ಷೆಯ ಪರವಾಗಿ ಧ್ವನಿಯೆತ್ತಲು ಮುಂದಾದರು. ತಕ್ಷಣ ರೇವಣ್ಣ ನೀವು ಸುಮ್ಮನಿರಿ ನಾನು ಹೇಳುತ್ತೇನೆ ಎಂದು ಎಂಎಲ್ಸಿ ಗೋಪಾಲಸ್ವಾಮಿಗೆ ಸೂಚಿಸಿದರು.








