ಬಿಕ್ಕಟ್ಟಿನಿಂದ ಬಳಲುತ್ತಿರುವ ಯೆಸ್ ಬ್ಯಾಂಕ್ ನ ಮೇಲಿನ ನಿರ್ಬಂಧವನ್ನು ಇದೇ 18ರಂದು ಕೇಂದ್ರ ಸರ್ಕಾರ ಹಿಂಪಡೆಯಲಿದ್ದು, ಬುಧವಾರ ಸಂಜೆ 6:00 ರಿಂದ ಪೂರ್ಣ ಬ್ಯಾಂಕಿಂಗ್ ಸೇವೆಗಳನ್ನು ಪುನರಾರಂಭಿಸುವುದಾಗಿ ಯೆಸ್ ಬ್ಯಾಂಕ್ ಹೇಳಿದೆ. ಸಿಇಒ ಪ್ರಶಾಂತ್ ಕುಮಾರ್ ನೇತೃತ್ವದ ಹೊಸ ಆಡಳಿತ ಮಂಡಳಿಯು ತಿಂಗಳಾಂತ್ಯದಿಂದ ಕಾರ್ಯನಿರ್ವಹಿಸಲಿದ್ದು, ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಮಾಜಿ ಕಾರ್ಯನಿರ್ವಾಹಕೇತರ ಅಧ್ಯಕ್ಷ ಸುನಿಲ್ ಮೆಹ್ತಾ, ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿ ಮಹೇಶ್ ಕೃಷ್ಣಮೂರ್ತಿ ಮತ್ತು ಅತುಲ್ ಭೇಡಾ ಅವರು ಹೊಸ ಆಡಳಿತ ಮಂಡಳಿಯಲ್ಲಿ ಇರಲಿದ್ದಾರೆ.
‘ಬ್ಯಾಂಕಿಂಗ್ ನ ಎಲ್ಲ ಸೇವೆಗಳು 2020ರ ಮಾರ್ಚ್ 18ರಂದು ಸಂಜೆ 6ರಿಂದ ಆರಂಭವಾಗಲಿವೆ. ಮಾರ್ಚ್ 19ರಿಂದ ನಮ್ಮ 1,132 ಶಾಖೆಗಳಲ್ಲಿ ಯಾವುದೇ ಶಾಖೆಗೆ ಭೇಟಿ ನೀಡಿ, ಸೇವೆ ಪಡೆಯಿರಿ. ನಮ್ಮ ಎಲ್ಲ ಡಿಜಿಟಲ್ ಸೇವೆಗಳು ಹಾಗೂ ಪ್ಲಾಟ್ ಫಾರ್ಮ್ ಗಳು ಸೇವೆಗೆ ತೆರೆದುಕೊಳ್ಳಲಿವೆ’ ಎಂದು ಯೆಸ್ ಬ್ಯಾಂಕ್ ಸೋಮವಾರ ಟ್ವೀಟಿಸಿದೆ.
ದೇಶದ ಅತಿದೊಡ್ಡ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್.ಬಿ.ಐ) ಶೇ 49ರಷ್ಟು ಷೇರು ಖರೀದಿಸಲಿದ್ದು, ಮೂರು ವರ್ಷಗಳವರೆಗೆ ಷೇರುಪಾಲನ್ನು ಶೇ 26ಕ್ಕಿಂತಲೂ ಕೆಳಕ್ಕೆ ಇಳಿಸುವಂತಿಲ್ಲ. ಇತರೆ ಹೂಡಿಕೆದಾರರು ಮತ್ತು ಹಾಲಿ ಷೇರುದಾರರು ಬ್ಯಾಂಕ್ನಲ್ಲಿ ಶೇ 75ರಷ್ಟು ಷೇರುಪಾಲನ್ನು ಮೂರು ವರ್ಷಗಳ ಅವಧಿಗೆ (ಲಾಕ್ ಇನ್ ಪಿರಿಯಡ್) ತೆಗೆಯುವಂತಿಲ್ಲ. 100ಕ್ಕಿಂತಲೂ ಕಡಿಮೆ ಷೇರು ಹೊಂದಿರುವವರಿಗೆ ಇದು ಅನ್ವಯವಾಗುವುದಿಲ್ಲ.
ಲಾಕ್ ಇನ್ ಪಿರಿಯಡ್ ವಿಧಿಸಿರುವುದರಿಂದ ಸೋಮವಾರ ಯೆಸ್ ಬ್ಯಾಂಕ್ ಷೇರು ಬೆಲೆ ಶೇ 43ರಷ್ಟು ಏರಿಕೆಯಾಗಿ ₹36.55 ತಲುಪಿತು. ಎಸ್.ಬಿ.ಐ ಅಲ್ಲದೆ, ಹಲವು ಬ್ಯಾಂಕ್ ಗಳು ಯೆಸ್ ಬ್ಯಾಂಕ್ ನಲ್ಲಿ ಹೂಡಿಕೆಗೆ ಮುಂದಾಗಿವೆ.
ಈಗಾಗಲೇ ಯೆಸ್ ಬ್ಯಾಂಕ್‌ನಿಂದ ಸಾಲ ಪಡೆದಿರುವ ದೊಡ್ಡ ದೊಡ್ಡ ಕಂಪನಿಗಳಿಗೆ ಇಡಿ ಸಮನ್ಸ್ ನೀಡಿದ್ದು, ಈ ಪೈಕಿ ರಿಲಾಯೆನ್ಸ್ ಗ್ರೂಪ್ ಕೂಡ ಇದೆ. ಹಾಗಾಗಿ, ಜಾರಿ ನಿರ್ದೇಶನಾಲಯ (ಇಡಿ), ರಿಲಯನ್ಸ್ ಗ್ರೂಪ್ ಮುಖ್ಯಸ್ಥ ಅನಿಲ್ ಅಂಬಾನಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದ್ದು, ಸೋಮವಾರ ಕಚೇರಿಗೆ ಬರುವಂತೆ ಸೂಚಿಸಿತ್ತು. ಆದರೆ ವಿಚಾರಣೆಗೆ ಹಾಜರಾಗಲು ಹೆಚ್ಚಿನ ಸಮಯ ಕೇಳಿರುವ ಅನಿಲ್ ಅಂಬಾನಿ, ಅನಾರೋಗ್ಯದ ಕಾರಣ ನೀಡಿ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ.








