ಸೇನಾ ವೇಶದಲ್ಲೆ ಜೇಮ್ಸ್ ಚಿತ್ರ ನೋಡಲು ಬಂದ ನಿವೃತ್ತ ಯೋಧ
ಬೆಳಗಾವಿ: ಪವರ್ ಸ್ಟಾರ್ ಡಾ. ಪುನಿತ್ ರಾಜ್ ಕುಮಾರ್ ಅವರು ಅಭಿನಯದ ಜೇಮ್ಸ್ ಚಿತ್ರ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದ್ದು, ಈ ಚಿತ್ರವನ್ನು ನೋಡಲು ಅಭಿಮಾನಿ ನಿವೃತ್ತ ಯೋಧರೊಬ್ಬೊರು ಸೇನಾ ಸಮವಸ್ತ್ರದಲ್ಲೇ ಆಗಮಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದ ನಿವಾಸಿ ನಿವೃತ್ತ ಯೋಧ ವಿನಾಯಕ ಮೇದಾರ್ ಸೇನಾ ಸಮವಸ್ತ್ರದಲ್ಲೇ ನಗರದ ಚಿತ್ರಾ ಚಿತ್ರಮಂದಿರಕ್ಕೆ ಆಗಮಿಸಿ, ಕೇಕ್ ಕತ್ತರಿಸಿ ಅಪ್ಪು ಹುಟ್ಟುಹಬ್ಬ ಆಚರಿಸಿದರು. ವಿನಾಯಕ ಅವರು ಭಾರತೀಯ ಸೇನೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿದ್ದಾರೆ. ಇವರು ಪುನೀತ್ ಅಪ್ಪಟ್ಟ ಅಭಿಮಾನಿಯಾಗಿದ್ದಾರೆ.
ಈ ಕುರಿತು ಮಾತನಾಡಿದ ಅವರು ಅಪ್ಪು ಕೊನೆಯ ಚಿತ್ರದಲ್ಲಿ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ನಾನು ನಿವೃತ್ತ ಯೋಧನಾಗಿ ಸೇನಾ ಸಮವಸ್ತ್ರದಲ್ಲೇ ಚಿತ್ರ ನೋಡಲು ಬಂದಿದ್ದೇನೆ. ಅಪ್ಪು ನಮ್ಮ ಮನದಲ್ಲಿ ಎಂದೆಂದಿಗೂ ಅಜರಾಮರವಾಗಿ ಇರುತ್ತಾರೆ. ಪುನೀತ್ ಕೊನೆಯ ಚಿತ್ರ ಎಂದು ದಯವಿಟ್ಟು ಯಾರೂ ಹೇಳಬೇಡಿ ಎಂದು ಮನವಿ ಮಾಡಿಕೊಂಡರು.
ಬೆಳಗಾವಿಯ ಚಿತ್ರಾ ಟಾಕೀಸ್, ಸ್ವರೂಪ ನರ್ತಕಿ ಹಾಗೂ ನ್ಯೂಕ್ಲಿಯಸ್ ಮಾಲ್ ಸೇರಿ ಮೂರು ಚಿತ್ರಮಂದಿರಗಳಲ್ಲಿ ಜೇಮ್ಸ್ ರಿಲೀಸ್ ಆದ ಹಿನ್ನಲೆಯಲ್ಲಿ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುತ್ತಿದ್ದಾರೆ. ಈಗಾಗಲೇ 100ಕ್ಕೂ ಅಭಿಮಾನಿಗಳು ರಕ್ತದಾನ ಮಾಡಿದ್ದಾರೆ.ಇದರ ಜೊತೆಗೆ ಪುನೀತ್ ಕೆಲ ಅಭಿಮಾನಿಗಳಿಂದ ಅನ್ನ ಸಂತರ್ಪಣೆ ಆಯೋಜಿಸಿದ್ದು, ಉಪ್ಪಿಟ್ಟು,ಶಿರಾ ವಿತರಿಸುತ್ತಿದ್ದಾರೆ.









