ಬೆಂಗಳೂರು : ಕೊರೊನಾ ವೇಗಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಸರ್ಕಾರ ಒಂದು ವಾರದ ಕಾಲ ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದೆ. ಇದರ ಮಧ್ಯೆ ಬೇರೆ ಜಿಲ್ಲೆಗಳಲ್ಲೂ ಲಾಕ್ ಡೌನ್ ಜಾರಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಯಾವ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿವೆಯೋ ಅಂತಹ ಕಡೆ ಜಿಲ್ಲಾಧಿಕಾರಿಗಳು ಮತ್ತು ತಜ್ಞರು ನೀಡುವ ವರದಿ ಮೇಲೆ ಲಾಕ್ ಡೌನ್ ಜಾರಿ ಮಾಡಲಾಗುವುದು. ಏಕಾಏಕಿ ಕೆಲವು ಜಿಲ್ಲೆಗಳಲ್ಲಿ ಲಾಕ್ ಡೌನ್ ಜಾರಿ ಮಾಡಲು ಸಾಧ್ಯವಿಲ್ಲ. ಸೋಂಕಿನ ಪ್ರಕರಣಗಳು ಹೆಚ್ಚಾಗಿರುವುದು ಹಾಗೂ ಪರಿಸ್ಥಿತಿ ಕೈ ಮೀರಿದ್ದರೆ ಅಂತಹ ಕಡೆ ಜಿಲ್ಲಾಧಿಕಾರಿಗಳು ಹಾಗೂ ತಜ್ಞರ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದರು.
ಈಗಾಗಲೇ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ನಾಳೆ ಸಂಜೆಯಿಂದ ಅನ್ವಯವಾಗುವಂತೆ ಒಂದು ವಾರ ಕಾಲ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಬೇರೆ ಜಿಲ್ಲೆಗಳಲ್ಲಿ ಇದನ್ನು ಜಾರಿ ಮಾಡುವ ಕುರಿತಂತೆ ಮುಖ್ಯಮಂತ್ರಿಯವರು ಸೂಕ್ತ ನಿರ್ಧಾರ ತೆಗೆದುಕೊಳ್ಳುವರು ಅಶೋಕ್ ಸ್ಪಷ್ಟಪಡಿಸಿದ್ದಾರೆ.








