ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಮಾರ್ಗ ಅಲ್ಲ : ಆರ್.ಅಶೋಕ್
ಬೆಂಗಳೂರು : ನಗರದಲ್ಲಿ ಪ್ರತಿದಿನ ಕೊರೊನಾ ಸ್ಫೋಟವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಈಗ ವಿಧಿಸುವ ಒಂದು ವಾರದ ಲಾಕ್ ಡೌನ್ ಅನ್ನು ಮುಂದುವರಿಸುತ್ತೆ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅವರು ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಮಾಡುವುದರಿಂದ ಕೊರೊನಾ ನಿಯಂತ್ರಣ ಆಗುವುದಿಲ್ಲ. ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಮಾರ್ಗ ಅಲ್ಲ. ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ ಹೇಳುತ್ತಿದ್ದೇನೆ. ಲಾಕ್ ಡೌನ್ ಮುಂದುವರಿಸಲ್ಲ ಎಂದು ಸ್ಪಷ್ಟಪಡಿಸಿದರು.
ಸ್ವಲ್ಪ ನಿಟ್ಟುಸಿರು ತೆಗೆದುಕೊಳ್ಳಬೇಕಿತ್ತು. ಈಗ ಎಲ್ಲರೂ ತೆಗೆದುಕೊಂಡಿದ್ದೀರಿ. ಮತ್ತೆ ಮತ್ತೆ ಲಾಕ್ ಡೌನ್ ಮಾಡಿಕೊಂಡು ಹೋಗಲು ಆಗುವುದಿಲ್ಲ. ಒಂದು ವಾರ ಲಾಕ್ ಡೌನ್ ಮುಗಿಯುತ್ತಿದ್ದಂತೆ ಎಂದಿನಂತೆ ಎಲ್ಲವೂ ಕೆಲಸಗಳು ಶುರುವಾಗುತ್ತದೆ ಎಂದು ವದಂತಿಗಳಿಗೆ ಕಂದಾಯ ಸಚಿವರು ಫುಲ್ ಸ್ಟಾಪ್ ಇಟ್ಟಿದ್ದಾರೆ.
ಇದೇ ವೇಳೆ ಬೆಡ್ ಸಮಸ್ಯೆ ಬಗ್ಗೆ ಮಾತನಾಡಿದ ಅಶೋಕ್, ಖಾಸಗಿ ಆಸ್ಪತ್ರೆಗಳು ಬೆಡ್ ಕೊಡುತ್ತಿಲ್ಲ. ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿಯೂ ಬೆಡ್ ಸಿಗುತ್ತಿಲ್ಲ. ಹೀಗಾಗಿ ನಾಳೆ ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳ ಮುಖ್ಯಸ್ಥರ ಜೊತೆ ಸಭೆ ನಡೆಸುತ್ತೇವೆ ಎಂದು ತಿಳಿಸಿದರು.
ಮುಂದುವರಿದು, ಖಾಸಗಿ ಆಸ್ಪತ್ರೆಗಳಲ್ಲಿ ರೋಗ ಲಕ್ಷಣ ಇಲ್ಲದವರನ್ನ ಕೂಡಲೇ ಡಿಸ್ಚಾರ್ಜ್ ಮಾಡಬೇಕು ಎಂದು ಹೇಳಿದ ಸಚಿವರು, ಕೆಲವು ಕಡೆ ರೋಗ ಲಕ್ಷಣ ಇಲ್ಲದಿದ್ದರೂ ಚಿಕಿತ್ಸೆ ಕೊಡುತ್ತಿದ್ದಾರೆ. ಹೀಗಾಗಿ ಬೆಡ್ ಗಳು ನಿರೀಕ್ಷಿತ ಮಟ್ಟದಲ್ಲಿ ಕೊಡುತ್ತಿಲ್ಲ. ಯಾವುದೇ ರೋಗ ಲಕ್ಷಣ ಇಲ್ಲದಿರುವ ರೋಗಿಯನ್ನು ಆಸ್ಪತ್ರೆಯಲ್ಲಿ ಯಾವುದೇ ಕಾರಣ ಇಟ್ಟುಕೊಳ್ಳಬಾರದು ಎಂದು ಇಂದು ಸಂಜೆ ವೇಳೆಗೆ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅಧಿಕೃತ ಆದೇಶ ಹೊರಡಿಸುತ್ತಾರೆ ಎಂದು ತಿಳಿಸಿದ್ದಾರೆ.








