ಚಂದನವನದ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರ ಪುತ್ರ ರಣ್ವಿತ್ ಶೆಟ್ಟಿ ಏಪ್ರಿಲ್ 7ರಂದು ಮೊದಲವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಕೊರೋನಾದಿಂದ ದೇಶದಲ್ಲಿ ಲಾಕ್ಡೌನ್ ಜಾರಿಯಲ್ಲಿರುವ ಕಾರಣದಿಂದ ರಿಷಬ್ ಶೆಟ್ಟಿಯವರ ಹುಟ್ಟಿಬೆಳೆದ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಲಾಯಿತು.
ಹಳ್ಳಿ ಸೊಗಡಿನ ಅಲಂಕಾರದಲ್ಲಿ, ತೆಂಗು,ಅಡಿಕೆಯ ಹಿಂಗಾರ, ನಡುವೆ ಬಾಳೆಯ ಸಿಂಗಾರ, ಅಲ್ಲಲ್ಲಿ ಕಾಡಿನ ಹೂ ಹಣ್ಣುಗಳ ಸುಗಂಧದ ನಡುವೆ ಮೊದಲ ಮಳೆಯ ಸಂಭ್ರಮದಲ್ಲಿ ರಣ್ವಿತ್ ನ ಮೊದಲವರ್ಷದ ಹುಟ್ಟುಹಬ್ಬ ಕೆಲವೇ ಪ್ರೀತಿಪಾತ್ರರ ಜೊತೆ ಆಚರಿಸಲಾಯಿತು.
ಮಗನ ಹುಟ್ಟುಹಬ್ಬಕ್ಕಾಗಿ ವಿಶೇಷವಾಗಿ ವಿಡಿಯೋ ಸಾಂಗ್ವೊಂದನ್ನು ತಯಾರಿ ಮಾಡಿರುವ ರಿಷಬ್, ಅದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ‘ವರುಷದ ಹಿಂದೆ ಹುಟ್ಟಿದ ಈ ಪುಟ್ಟ ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ. ಅಂದಿನಿಂದ ಇಂದಿನವರೆಗೆ ನಿತ್ಯ ಹಬ್ಬದಂತಿರುವ ಇವನ ಮುಗ್ಧತೆ ಮನೆಗೆ ದೀಪ, ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ. ಮೊದಲ ವರ್ಷ ತುಂಬಿದ ಸಡಗರದಲ್ಲಿ ನಿಮ್ಮೆಲ್ಲರ ಆಶೀರ್ವಾದ ಇವನಿಗಿರಲಿ’ ಎಂದು ಬರೆದುಕೊಂಡಿದ್ದಾರೆ.
ರಿಷಬ್ ಇತ್ತೀಚೆಗಷ್ಟೇ ತನ್ನ ಮಗನಿಗೆ ಎಣ್ಣೆ ಹಚ್ಚುತ್ತಿರುವ ಸುಂದರವಾದ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು, ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ. ಒಟ್ಟಾರೆ ಎಲ್ಲರ ತರ ನಮ್ದೂ `ವರ್ಕ್ ಫ್ರಂ ಹೋಂ’ ಜೋರಾಗ್ ನಡೀತಿದೆ ಎಂದು ಬರೆದುಕೊಂಡಿದ್ದರು.








