Rishabh Pant : ರಿಷಬ್ ಪಂತ್ ಗೆ ದೊಡ್ಡ ಸಮಸ್ಯೆ.. ಯಾಮಾರಿದ್ರೆ ಅಷ್ಟೆ
ಟೀಂ ಇಂಡಿಯಾ ಸ್ಟಾಂಡಿಂಗ್ ಕ್ಯಾಪ್ಟನ್ ರಿಷಬ್ ಪಂತ್ ಗೆ ದೊಡ್ಡ ಸಮಸ್ಯೆವೊಂದು ಎದುರಾಗಿದೆ. ಸದ್ಯಕ್ಕೆ ಇದು ದೊಡ್ಡ ಸಮಸ್ಯೆ ಅಲ್ಲದಿರಬಹುದು ಆದರೆ ಮುಂಬರುವ T20 ವಿಶ್ವಕಪ್ 2022 ರಲ್ಲಿ ಟೀಮ್ ಇಂಡಿಯಾ ತಂಡದಲ್ಲಿ ಪಂತ್ ಸ್ಥಾನ ಕಳೆದುಕೊಳ್ಳುವ ಸಾಧ್ಯತೆಗಳಿವೆ. ಪಂತ್ ಗೆ ಎದುರಾಗಿರುವ ಅಪಾಯ ಬೇರೆ ಯಾವುದೂ ಅಲ್ಲ, ಟೀಂ ಇಂಡಿಯಾದ ಹಿರಿಯ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್..!
ಹೌದು..! 37 ನೇ ವಯಸ್ಸಿನಲ್ಲಿ, ಕಾರ್ತಿಕ್ ವಿಶ್ವದ ಅತ್ಯುತ್ತಮ ಫಿನಿಶರ್ ಆಗಿ ಮಿಂಚುತ್ತಿದ್ದಾರೆ. ದಿನದಿಂದ ದಿನಕ್ಕೆ ದಿನೇಶ್ ಕಾರ್ತಿಕ್ ಗೆ ವಯಸ್ಸಾಗುತ್ತಿದ್ದರೂ ಅವರು ಬ್ಯಾಟಿಂಗ್ ನಲ್ಲಿ ಮತ್ತಷ್ಟು ಪ್ರಬುದ್ಧರಾಗುತ್ತಿದ್ದಾರೆ.
ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಆರ್ ಸಿಬಿ ಪರ ಬೊಂಬಾಟ್ ಪ್ರದರ್ಶನ ನೀಡಿದ್ದ ದಿನೇಶ್ ಕಾರ್ತಿಕ್ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದರು. ಅದರಂತೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯಲ್ಲಿ ದಿನೇಶ್ ಮಿಂಚುತ್ತಿದ್ದಾರೆ. ಸೊಗಸಾದ ಬ್ಯಾಟಿಂಗ್ ಪ್ರದರ್ಶನದ ಮೂಲಕ ದಿನೇಶ್ ಕಾರ್ತಿಕ್ ಆಯ್ಕೆಗಾರರಿಗೆ ಸವಾಲು ಎಸೆಯುತ್ತಿದ್ದಾರೆ. ಇದು ರಿಷಬ್ ಪಂತ್ ಅವರಿಗೆ ದೊಡ್ಡ ತಲೆನೋವಾಗಿದೆ. ಅಂದಹಾಗೆ ಟಿ 20 ವಿಶ್ವಕಪ್ ಗೆ ನಾಲ್ಕು ತಿಂಗಳು ಮಾತ್ರ ಬಾಕಿ ಉಳಿದಿದೆ. ಹೀಗಾಗಿ ಬಿಸಿಸಿಐ ಆಸ್ಟ್ರೇಲಿಯಾಗೆ ಬಲಿಷ್ಠ ತಂಡವನ್ನು ಕಳುಹಿಸಲು ತಯಾರಿ ನಡೆಸುತ್ತಿದೆ. ಅದೇ ನಿಜವಾದ್ರೆ ಸದ್ಯ ಕಾರ್ತಿಕ್ ಫಾರ್ಮ್ ಇರುವ ನೋಡಿದ್ರೆ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆಯೋದು ಪಕ್ಕಾ ಎನ್ನಲಾಗುತ್ತಿದೆ.

ಒಂದು ವೇಳೆ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ವಿಶ್ವಕಪ್ ಗೆ ರಿಷಬ್ ಪಂತ್ ಆಯ್ಕೆ ಆದ್ರೂ ಆಡುವ ಅಂತಿಮ ಹನ್ನೊಂದರ ತಂಡದಲ್ಲಿ ಸ್ಥಾನ ಸಿಗೋದು ಕಷ್ಟ ಅಂತಾನೇ ಹೇಳಬಹುದು. ಕಾರ್ತಿಕ್ ಗೆ ಫಾರ್ಮ್ ಮಾತ್ರವಲ್ಲದೇ ಮತ್ತೊಂದು ಅಡ್ವಾಂಟೇಜ್ ಕೂಡ ಇದೆ. ಕಾರ್ತಿಕ್ ವಯಸ್ಸನ್ನ ಗಮನಿಸಿದ್ರೆ ಅವರು ರಿಟೈರ್ಮೆಂಟ್ ಹತ್ತಿರದಲ್ಲಿದ್ದಾರೆ. ಅಬ್ಬಾಬ್ಬ ಅಂದ್ರೆ ಇನ್ನು ಒಂದು ವರ್ಷ ಮಾತ್ರ ತಂಡದಲ್ಲಿ ಸ್ಥಾನ ಪಡೆಯುತ್ತಾರೆ. ಹೀಗಾಗಿ ಟಿ 20 ವಿಶ್ವಕಪ್ ಗೆ ದಿನೇಶ್ ಕಾರ್ತಿಕ್ ಗೆ ಅವಕಾಶ ನೀಡಿದ್ರೆ ಒಳ್ಳೆಯದು ಅನ್ನೋದು ಬಿಸಿಸಿಐ ಅಭಿಪ್ರಾಯ .
ಅಲ್ಲದೇ ದಿನೇಶ್ ಕಾರ್ತಿಕ್ ಕೂಡ ಟೀಂ ಇಂಡಿಯಾಗೆ ವಿಶ್ವಕಪ್ ಗೆಲ್ಲಿಸಿಕೊಡಬೇಕು ಎಂದು ಸಾಕಷ್ಟು ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಈಗಿರುವ ಸಂದರ್ಭದಲ್ಲಿ ಕಾರ್ತಿಕ್ ಇರುವ ಫಾರ್ಮ್ ನಲ್ಲಿ ಅದೇ ಕಷ್ಟವಲ್ಲ ಎಂದು ಕ್ರಿಕೆಟ್ ವಿಶ್ಲೇಷಕರ ಮಾತಾಗಿದೆ.
ಇದಲ್ಲದೆ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಪಂತ್ ನಾಯಕರಾಗದಿದ್ದರೆ ಅವರು ತಂಡದಲ್ಲಿ ಸ್ಥಾನ ಕಳೆದುಕೊಳ್ಳುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಪಂತ್ ಬ್ಯಾಡ್ ಫಾರ್ಮ್ ನಲ್ಲೂ ಕೂಡ ಇದ್ದಾರೆ. ಸತತವಾಗಿ ಪಂತ್ ವಿಫಲರಾಗುತ್ತಲೇ ಇದ್ದಾರೆ. ಇನ್ನೇನು ತಂಡದಿಂದ ಹೊರ ಬೀಳುತ್ತಾರೆ ಅನ್ನೋಷ್ಟರಲ್ಲಿ ಒಂದೊಳ್ಳೆ ಇನ್ನಿಂಗ್ಸ್ ಆಡಿ ತಂಡದಲ್ಲಿ ಸ್ಥಾನ ಪಡೆಯುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಪಂತ್ ಕ್ಯಾಪ್ಟನ್ ಆಗಿದ್ದರೂ ಜವಾಬ್ದಾರಿಯುತವಾಗಿ ಬ್ಯಾಟ್ ಬೀಸುತ್ತಿಲ್ಲ. ಬದಲಾಗಿ ಬೇಡವಾದ ಹೊಡೆತಗಳಿಗೆ ಕೈ ಹಾಕಿ ವಿಕೆಟ್ ಒಪ್ಪಿಸುತ್ತಿದ್ದಾರೆ. ಇತ್ತ ಮತ್ತೊಬ್ಬ ವಿಕೆಟ್ ಕೀಪರ್ ಇಶಾನ್ ಕಿಶನ್, ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಬೊಂಬಾಟ್ ಪ್ರದರ್ಶನ ನೀಡುತ್ತಿದ್ದಾರೆ. ಸರಣಿಯಲ್ಲಿ ಇಶಾನ್ ಟಾಪ್ ಸ್ಕೋರರ್ ಆಗಿ ಮಿಂಚುತ್ತಿದ್ದಾರೆ. ಇದನ್ನ ನೋಡಿದ್ರೆ ವಿಕೆಟ್ ಕೀಪರ್ ಕಮ್ ಬ್ಯಾಟ್ ಮೆನ್ ಆಗಿ ದಿನೇಶ್ ಕಾರ್ತಿಕ್, ಇಶಾನ್ ಕಿಶನ್ ಒಳ್ಳೆಯ ಆಯ್ಕೆ ಆಗಿದ್ದಾರೆ.








